
ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ವಿಚಾರವಾಗಿ ಗರಂ ಆದ ಸಚಿವ ಸತೀಶ್ ಜಾರಕಿಹೊಳಿ, ಪದೇ ಪದೇ ಸಿಎಂ ಬದಲಾವಣೆ ಚರ್ಚೆಯ ಅವಶ್ಯಕತೆ ಇಲ್ಲ. ನಿನ್ನೆಯಷ್ಟೇ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಎಂದು ಸುದೀರ್ಘವಾಗಿ ಹೇಳಿದ್ದೇನೆ. ಮತ್ತದೇ ಚರ್ಚೆ ಮುಂದುವರೆಸುವುದು ಸರಿಯಲ್ಲ ಎಂದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಮತ್ತೆ ಮತ್ತೆ ಅದೇ ವಿಚಾರಗಳ ಬಗ್ಗೆ ಚರ್ಚೆಗಳು ಬೇಡ. ಈಗ ಸಿಎಂ ಆಗಿ ಸಿದ್ದರಾಮಯ್ಯ ಅವರು ಇದ್ದಾರೆ. ಅವರನ್ನು ಇಳಿಸುವ ಪ್ರಶ್ನೆ ಇಲ್ಲ. ಅವರನ್ನು ಇಳಿಸುವವರು ಯಾರು? ಅನಗತ್ಯವಾಗಿ ಚರ್ಚಿಸುವ ಅವಶ್ಯಕತೆ ಇಲ್ಲ. ಸರ್ಕಾರದ ಮುಂದೆ ಸಾಕಷ್ಟು ಸಮಸ್ಯೆಗಳಿವೆ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ಕೊಡೋಣ ಎಂದರು.
ಬರಿ ಮುಖ್ಯಮಂತ್ರಿ ಮುಖ್ಯಮಂತ್ರಿ ಎನ್ನುತ್ತಿದ್ದರೆ ಇವರಿಗೆ ಬೇರೆ ಕೆಲಸವಿಲ್ಲವೇ ಎಂದು ಜನ ಕೇಳ್ತಾರೆ. ಸಿಎಂ ಸೀಟ್ ಗೆ ಅಭಿಯಾನ ಅಂತ ನಾವ್ಯಾರೂ ಶುರುಮಾಡಿಲ್ಲ. ಮುಖ್ಯಮಂತ್ರಿಗಳನ್ನು ಮಾಡುವುದು ಪಕ್ಷ ಹಾಗೂ ಶಾಸಕರು. ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ನಾವೆಲ್ಲರೂ ಸಕಾರಾತ್ಮಕವಾಗಿಯೇ ಇದ್ದೇವೆ ಎಂದು ಹೇಳಿದರು.