
ಬೆಂಗಳೂರು: ಪ್ರಭಾವಿ ಸಚಿವರೊಬ್ಬರಿಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದೆ. ಯಾರು ಮಾಡಿದ್ದಾರೆ ಅಂತ ಹೇಳಿದರೆ ಅದು ರಾಜಕೀಯ ಆರೋಪವಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಸ್ ಜಾರಕಿಹೊಳಿ, ಸಚಿವರು ದೂರು ನೀಡಿದರೆ ಅಧಿಕೃತವಾಗಿ ದೂರು ದಾಖಲಾಗುತ್ತೆ. ಈಗಾಗಲೇ ಸಚಿವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಮಾಡಲೆಂದೇ ಒಂದು ತಂಡವಿದ್ದಂತಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಹನಿಟ್ರ್ಯಾಪ್ ಮಾಡಿ ಒಂದು ವಿಕೇಟ್ ಬೀಳಿಸಲು ಯತ್ನಿಸಿದ್ದಾರೆ. ಆದರೆ ಆ ವಿಕೆಟ್ ಅಷ್ಟು ಸುಲಭವಾಗಿ ಬಿದ್ದಿಲ್ಲ. ರಾಜಕೀಯ ಇಂದು ಕೆಳಮಟ್ಟಕ್ಕೆ ಹೋಗಿದೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹನಿಟ್ರ್ಯಾಪ್ ಮಾಡಿದರು, ಈಗ ನಮ್ಮ ಸರ್ಕಾರದಲ್ಲೇ ಒಂದು ವಿಕೆಟ್ ಬೀಳಿಸಲು ಷಡ್ಯಂತ್ರ ನಡೆಸಿದ್ದಾರೆ. ಈ ಬಗ್ಗೆ ಸಚಿವರಿಗೆ ಕಾನೂನು ಪ್ರಕಾರ ದೂರು ನೀಡಲು ಹೇಳಿದ್ದೇವೆ. ನಮ್ಮ ಪಕ್ಷದಲ್ಲಿ ಇರೋರೇ ಮಾಡಿರಬಹುದು. ರಾಜಕೀಯ ಇಂದು ಕೆಟ್ಟು ಹೋಗಿದೆ. ಹನಿಟ್ರ್ಯಾಪ್ ಜಾಲ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.