
ಮಂಗಳೂರು: ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಹೈಕಮಾಂಡ್ ಹೇಳಿರುವಾಗ ನಾನು ಮತ್ತೆ ಅದರ ಬಗ್ಗೆ ಚರ್ಚೆ ಮಾಡಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನನಗೆ ಸಿಎಂ ಪೋಸ್ಟ್ ಕೊಡೋದು ಕಷ್ಟ. ನನಗೆ ಸಿಎಂ ಹುದ್ದೆ ಕೊಡುವ ಪ್ರಶ್ನೆಯೇ ಇಲ್ಲ. ಅದು ಅಷ್ಟು ಸುಲಭವೂ ಅಲ್ಲ. ಬಹಳ ಕಷ್ಟದ ಕೆಲಸ. ಸಿದ್ದರಾಮಯ್ಯನವರೇ ಮುಂದುವರೆಯಬೇಕೆಂದು ಅವರೇ ಹೇಳಿದ್ದಾರೆ. ಹಾಗಾಗಿ ನಾನು ಮತ್ತೆ ಚರ್ಚೆ ಮಾಡುವುದಿಲ್ಲ ಎಂದರು.
ದೆಹಲಿ ಹೈಕಮಾಂಡ್ ಅಂದ್ರೆ ಅದೊಂದು ದೇವಸ್ಥಾನ. ದೇವಸ್ಥಾನಕ್ಕೆ ಯಾರುಬೇಕಾದರೂ ಹೋಗಿಬರಬಹುದು. ನಾವೆಲ್ಲ ಪ್ರಾರ್ಥನೆ ಮಾಡಬಹುದಷ್ಟೇ. ಸಾಮರ್ಥ್ಯವನ್ನು ಅವರು ನಿರ್ಧರಿಸುತ್ತಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು.