ಬೆಂಗಳೂರು: ಶೀಘ್ರದಲ್ಲಿಯೇ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ಬಳಿಕ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಪ್ರತಿಕ್ರಿಯೆ ಇನ್ನಷ್ಟು ಪುಷ್ಠಿ ನೀಡುವಂತಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತು ಕೇಳಿಬರುತ್ತಿವೆ. ಕೆಲವರ ಖಾತೆ ಬದಲಾವಣೆ ಬಗ್ಗೆಯೂ ಚರ್ಚೆಯಿದೆ. ಆದರೆ ಯಾವಾಗ ಮಾಡುತ್ತಾರೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸಂಪುಟ ಪುನಾರಚನೆ ಮಾಡಲುಬಹುದು. ಮಾಡದೆಯೂ ಇರಬಹುದು. ನನಗಂತೂ 2 ವರ್ಷಕ್ಕೆ ಸ್ಥಾನ ಬದಲಾವಣೆ ಎಂದು ಯಾರೂ ಹೇಳಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು. ದೆಹಲಿಯಿಂದ ಲಿಸ್ಟ್ ಬಂದರೆ ಎಲ್ಲರೂ ಬದಲಾಗಬೇಕು. ಲಿಸ್ಟ್ ನಲ್ಲಿ ಹೆಸರು ಬಂದರೆ ಮನೆ ಖಾಲಿ ಮಾಡ್ಕೊಂಡು ಹೋಗಬೇಕು. ದೆಹಲಿ ನಾಯಕರ ತೀರ್ಮನವೇ ಎಲ್ಲದಕ್ಕೂ ಫೈನಲ್ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಭಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಲಾಭಿಯಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಅಷ್ಟು ಸುಲಭದ ಮಾತಲ್ಲ, ಅದನ್ನು ನಿಭಾಯಿಸುವುದೂ ಸುಲಭವಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.