ಬೆಂಗಳೂರು: ರಸ್ತೆ ನಿರ್ವಹಣೆಗಾಗಿ ಮೈಲಿಗೂಲಿಗಳನ್ನು ನೇಮಕ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ದಶಕಗಳ ಹಿಂದೆ ರಸ್ತೆ ನಿರ್ವಹಣೆಗೆ ಮೈಲಿಗೂಲಿ ವ್ಯವಸ್ಥೆ ಜಾರಿಯಲ್ಲಿದ್ದು, ಇದನ್ನು ಮರು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಮೈಲಿಗೂಲಿಗಳನ್ನು ಹಿಂದೆ ಕಾಯಂ ಮಾಡುವ ಪದ್ಧತಿಯಿತ್ತು. ಈಗ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. 20 ಕಿಲೋ ಮೀಟರ್ ಗೆ ಒಬ್ಬರಂತೆ 2000 ಜನರನ್ನು ಮೈಲಿಗೂಲಿಗಳಾಗಿ ತಕ್ಷಣ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಳೆ ಬಂದ ಸಂದರ್ಭದಲ್ಲಿ ಆಗುವ ತೊಂದರೆ, ಗುಂಡಿ ಬಿದ್ದರೆ ಮೈಲಿಗೂಲಿಗಳು ಸ್ಥಳದಲ್ಲಿದ್ದು ಗಮನಿಸಿ ಕ್ರಮಕೈಗೊಳ್ಳುತ್ತಾರೆ. ಪ್ರಸ್ತುತ ಟೆಂಡರ್ ಕರೆಯುವ ಪ್ರಕ್ರಿಯೆ ದೀರ್ಘವಾಗಿರುವುದರಿಂದ ತೊಂದರೆಯಾಗುತ್ತದೆ. ಮೈಲಿಗೂಲಿಗಳು ಇದ್ದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುತ್ತಾರೆ. ಇನ್ನು ಮುಂದೆ ರಸ್ತೆ ಅಭಿವೃದ್ಧಿಪಡಿಸಿದ ಗುತ್ತಿಗೆದಾರರೇ 5 ವರ್ಷ ನಿರ್ವಹಣೆ ಮಾಡಬೇಕು. ಐಬಿಗಳ ನಿರ್ವಹಣೆಗೆ ಎರಡು ಮೂರು ಜನರ ಸೇವೆಗೆ ಗುತ್ತಿಗೆದಾರ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.