ಧಾರವಾಡ: ಸಿಡಿಯಲ್ಲಿರುವ ಯುವತಿ ಹೇಳಿಕೆಯಿಂದ ರಮೇಶ್ ಜಾರಕಿಹೊಳಿ ಪ್ರಕರಣ ತಿರುವು ಪಡೆದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಏನೇ ತಿರುವು ಪಡೆದರೂ ಪೊಲೀಸರ ತನಿಖೆಯಿಂದ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಮೇಶ್ ಜಾರಕಿಹೊಳಿ ದೂರು ನೀಡಿದ್ದು, ಎಸ್ಐಟಿ ಅಧಿಕಾರಿಗಳು ಅದೆಲ್ಲವನ್ನೂ ತನಿಖೆ ಮಾಡಬೇಕು. ತನಿಖೆಗೆ 90 ದಿನಗಳ ಸಮಯವಿದೆ. ಈ ವಿಚಾರದ ಬಗ್ಗೆ ರಮೇಶ್ ಜಾರಕಿಹೊಳಿ ಜೊತೆಗೆ ನಾನು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.
ರಮೇಶ ಜಾರಕಿಹೊಳಿ ವಿರುದ್ಧ ಯುವತಿ ಆರೋಪ ಮಾಡಿದ್ದು, ನಾವು ಏನೇ ಹೇಳಿದರೂ ನಮ್ಮ ಪರವಾಗಿ ಹೇಳುತ್ತೇವೆ. ಅವರು ಅವರ ಪರವಾಗಿ ಹೇಳಿಕೊಳ್ಳುತ್ತಾರೆ. ಇದೆಲ್ಲವನ್ನು ಪರಿಹರಿಸಲು ಪೊಲೀಸ್ ತನಿಖೆಯಿಂದ ಮಾತ್ರ ಸಾಧ್ಯವೆಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಷಡ್ಯಂತ್ರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್, ವಿಡಿಯೋ ಸತ್ಯಾಸತ್ಯತೆ ಬಗ್ಗೆ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ನಿರ್ಧಾರವಾಗಬೇಕು. ಕಾನೂನು ಯಾರೊಬ್ಬರ ಪರ ಮತ್ತು ವಿರುದ್ಧ ಇರುವುದಿಲ್ಲ. ಯಾವುದೇ ಪಕ್ಷದ ಪರವಾಗಿಯೂ ಕಾನೂನು ಇರುವುದಿಲ್ಲ. ಎಲ್ಲರಿಗೂ ಒಂದೇ ಕಾನೂನು. ತನಿಖೆಯ ನಂತರ ಸತ್ಯಾಂಶ ಹೊರಗೆ ಬರುತ್ತದೆ. ಯಾರೇ ಷಡ್ಯಂತ್ರ ಮಾಡಿದ್ದರೂ ಅದಕ್ಕೆಲ್ಲ ಕಾನೂನು ಇರುತ್ತದೆ. ಸಿಡಿ ಪ್ರಕರಣದಲ್ಲಿ ಅರ್ಜೆಂಟ್ ಮಾಡುವುದು ಬೇಡ, ಈಗಷ್ಟೇ ದೂರು ದಾಖಲಾಗಿದ್ದು ತಾಳ್ಮೆಯಿಂದ ಕಾಯೋಣ ಎಂದು ಹೇಳಿದ್ದಾರೆ.