
ಬೆಳಗಾವಿ: ಗ್ಯಾರಂಟಿ ಯೋಜನೆ ಜಾರಿಗೊಳಿಸಲು ಕಂಡೀಶನ್ ಅಪ್ಲೈ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಗ್ಯಾರಂಟಿ ತೆಗೆದುಕೊಳ್ಳಲು ಆಗುತ್ತಾ? ತೆರಿಗೆ ಪಾವತಿದಾರರು, ಸರ್ಕಾರಿ ನೌಕರರಿಗೆ ಗ್ಯಾರಂಟಿ ಯೋಜನೆ ಇಲ್ಲ. ಕೆಲವರು ನಮಗೆ ಗ್ಯಾರಂಟಿ ಬೇಡ ಎಂದು ಹೇಳಿದ್ದಾರೆ. ಬೇಡ ಎಂದವರಿಗೂ ಸರ್ಕಾರ ರೂಲ್ಸ್ ಮಾಡಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಸಚಿವ ಸಂಪುಟದಲ್ಲಿ ಸಂಪೂರ್ಣ ಮಾಹಿತಿ ಬರುತ್ತದೆ. ಹಲವೆಡೆ ವಿದ್ಯುತ್ ಕಂಬಗಳಿಂದ ನೇರವಾಗಿ ಕರೆಂಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಮೊದಲು ಮೀಟರ್ ಗಳನ್ನು ಹಾಕಿ ಮುಖ್ಯ ವಾಹಿನಿಗೆ ತರಬೇಕಿದೆ. ಕೆಲವು ತಾಂತ್ರಿಕ ಸಮಸ್ಯೆ ನಿವಾರಿಸಿ ಗ್ಯಾರಂಟಿ ಸ್ಕೀಂ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಜಾರಿಗೊಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ, ಸ್ವಲ್ಪ ತಡವಾಗಬಹುದು. ಆದರೆ, ಖಂಡಿತ ಜಾರಿ ಮಾಡುತ್ತೇವೆ ಮುಂದಿನ ಕ್ಯಾಬಿನೆಟ್ ನಲ್ಲಿ 2-3 ಗ್ಯಾರಂಟಿ ಸ್ಕೀಂ ಜಾರಿ ಮಾಡುತ್ತೇವೆ. ಉಳಿದ ಸ್ಕೀಂ ಗಳನ್ನು ಮತ್ತೊಂದು ಕ್ಯಾಬಿನೆಟ್ ನಲ್ಲಿ ಜಾರಿಗೆ ತರುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.