ಭಾರತೀಯ ಮೂಲದ ಮಹಿಳೆಯೊಬ್ಬಳು ಸೀರೆ ಧರಿಸಿ ಮ್ಯಾರಥಾನ್ ನಲ್ಲಿ ಓಡಿ, ಪ್ರಶಸ್ತಿ ಗೆದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. 41 ವರ್ಷದ ಒಡಿಯಾ ಮೂಲದ ಮಹಿಳೆ ಯುಕೆಯ ಮ್ಯಾಂಚೆಸ್ಟರ್ ನಗರದಲ್ಲಿ 42.5 ಕಿಲೋಮೀಟರ್ ಉದ್ದದ ಮ್ಯಾರಥಾನ್‌ನಲ್ಲಿ ಸೀರೆಯನ್ನು ಧರಿಸಿ ಎಲ್ಲರ ಗಮನ ಸೆಳೆದರು.
ಮಧುಸ್ಮಿತಾ ಜೆನಾ ಎಂಬಾಕೆಯೇ ಸೀರೆ ಧರಿಸಿ ಮ್ಯಾರಥಾನ್ ನಲ್ಲಿ ಭಾಗವಹಿಸಿದವರು. ಈಕೆ ಕಟಕ್ ಜಿಲ್ಲೆಯ ಕುಸುಪುರ್ ಗ್ರಾಮದ ಮೂಲವರಾಗಿದ್ದು, ಪ್ರಸ್ತುತ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮ್ಯಾರಥಾನ್ ನಲ್ಲಿ ಸೀರೆ ಧರಿಸಿ ಓಡಿರುವ ಈಕೆ ಬ್ರಿಟೀಷರ ಹುಬ್ಬೇರಿಸುವಂತೆ ಮಾಡಿದ್ದಾರೆ. ಸಂಬಲ್ಪುರಿ ಸೀರೆಯನ್ನು ಉಟ್ಟಿದ್ದ ಜೆನಾ 42.5 ಕಿಲೋಮೀಟರ್‌ಗಳನ್ನು ಕ್ರಮಿಸಲು ನಾಲ್ಕು ಗಂಟೆ 50 ನಿಮಿಷಗಳನ್ನು ತೆಗೆದುಕೊಂಡರು.
ನಾನು ಸೀರೆ ಉಟ್ಟುಕೊಂಡು ಮ್ಯಾರಥಾನ್ ನಲ್ಲಿ ಭಾಗವಹಿಸಲು ಇದೊಂದು ಆಹ್ಲಾದಕರ ಅನುಭವವಾಗಿತ್ತು. ಇದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಭಾರತೀಯ ಮಹಿಳೆಯರ ಸೀರೆ ಉಡುಪನ್ನು ಪ್ರದರ್ಶಿಸುವುದು ನನ್ನ ಉದ್ದೇಶವಾಗಿತ್ತು. ಆದರೆ, ಸೀರೆ ಉಟ್ಟು ಓಟವನ್ನು ಕವರ್ ಮಾಡುವುದು ಕಷ್ಟವಾಗಿತ್ತು. ಪ್ರೇಕ್ಷಕರ ಪ್ರೋತ್ಸಾಹದೊಂದಿಗೆ ಓಟವನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು.
ಬ್ರಿಟನ್‌ನಲ್ಲಿ ಬೇಸಿಗೆಯ ದಿನಗಳಲ್ಲಿ ಸೀರೆಯನ್ನು ಉಡುತ್ತಿದ್ದೆ. ಸೀರೆ ಉಟ್ಟ ಹೆಂಗಸರು ಓಡಲಾರರು ಎಂಬ ತಪ್ಪು ಕಲ್ಪನೆಗಳನ್ನು ದೂರ ಮಾಡಿದ್ದೇನೆ. ಸೀರೆ ಉಡುವುದು ನನ್ನ ದಿನನಿತ್ಯದ ವ್ಯಾಯಾಮಕ್ಕೆ ಅಡ್ಡಿಯಾಗುವುದಿಲ್ಲ ಎಂದು ಮಧುಸ್ಮಿತಾ ಜೆನಾ ಹೇಳಿದ್ರು.