ಮೈಸೂರಿನಲ್ಲಿ ಭೂಹಗರಣದ ಜಟಾಪಟಿ ತಾರಕಕ್ಕೇರಿದೆ. ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್ ರಾಜಕಾಲುವೆ ಮೇಲೆ ಕಲ್ಯಾಣಮಂಟಪ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದರು. ರೋಹಿಣಿ ಸಿಂಧೂರಿ ಮಾಡಿರುವ ಆರೋಪವನ್ನ ತಳ್ಳಿ ಹಾಕಿರುವ ಸಾರಾ ಮಹೇಶ್ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ನನ್ನ ಒಡೆತನದ ಸಾರಾ ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲ. ಬೇಕಿದ್ದರೆ ಉನ್ನತ ಮಟ್ಟದ ಅಧಿಕಾರಿಗಳು ಬಂದು ಸರ್ವೇ ಮಾಡಲಿ. ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣವಾಗಿದೆ ಅನ್ನೋದು ಸಾಬೀತಾದಲ್ಲಿ ಅದನ್ನ ಸಾರ್ವಜನಿಕರ ಬಳಕೆಗೆಂದು ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಅಲ್ಲದೆ ಸಾರ್ವಜನಿಕ ಜೀವನದಿಂದಲೇ ನಾನು ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ರೋಹಿಣಿ ಸಿಂಧೂರಿ ಮಾಡಿದ ಆರೋಪ ಸುಳ್ಳಾದಲ್ಲಿ ಅವರನ್ನ ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು ಎಂದು ಸಾರಾ ಮಹೇಶ್ ಬಹಿರಂಗ ಸವಾಲೆಸೆದಿದ್ದಾರೆ.