ಬಳ್ಳಾರಿ: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಆಸಕ್ತ ವಧು-ವರರು ಸಾಮೂಹಿಕ ವಿವಾಹ ನಡೆಯುವ ಆಯಾ ದೇವಸ್ಥಾನದ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ವರನಿಗೆ ಪ್ರೋತ್ಸಾಹಧನ(ಹೂವಿನ ಹಾರ,ಪಂಚೆ,ಶರ್ಟ್ ಮತ್ತು ಶಲ್ಯಗೆ)ವರನ ಉಳಿತಾಯ ಖಾತೆಗೆ 5 ಸಾವಿರ ರೂ. ಜಮಾ ಮಾಡಿಸಲಾಗುವುದು, ವಧುವಿಗೆ ಪ್ರೋತ್ಸಾಹಧನ(ಹೂವಿನ ಹಾರ,ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ)ವಧುವಿನ ಬ್ಯಾಂಕ್ ಉಳಿತಾಯ ಖಾತೆಗೆ 10 ಸಾವಿರ ರೂ. ಜಮಾ ಮಾಡಿಸಲಾಗುವುದು, ವಧುವಿಗೆ ಚಿನ್ನದ ತಾಳಿ, ಎರಡು ಗುಂಡು(ಅಂದಾಜು 8 ಗ್ರಾಂ ತೂಕ) ದೇವಸ್ಥಾನದ ವತಿಯಿಂದ (40 ಸಾವಿರ ರೂ.ಮೌಲ್ಯ) ಖರೀದಿಸಿ ನೀಡಲಾಗುವುದು.
ವಿವಾಹವಾದ ಜೋಡಿಗಳಿಗೆ ದೇವಸ್ಥಾನದ ವತಿಯಿಂದ ವಧು-ವರರಿಗೆ 55 ಸಾವಿರದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಆಸಕ್ತರು ಆಯಾ ದೇವಸ್ಥಾನದಲ್ಲಿ ವಿವಾಹ ನಡೆಯುವ 30 ದಿನಗಳ ಮುಂಚಿತವಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಸಾಮೂಹಿಕ ವಿವಾಹಗಳು ನಡೆಯುವ ದೇವಸ್ಥಾನಗಳ ವಿವರ:
ಹೂವಿನಹಡಗಲಿ ತಾಲೂಕಿನ ಶ್ರೀ ಮೈಲಾರ ಲಿಂಗಸ್ವಾಮಿ ದೇವಸ್ಥಾನ, ಕೊಟ್ಟೂರು ತಾಲೂಕಿನ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ, ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಶ್ರೀ ಉತ್ಸವಾಂಬ ದೇವಸ್ಥಾನದಲ್ಲಿ ಏ.29, ಮೇ 30, ಜೂ.27, ಜುಲೈ 4 ರಂದು ಸಾಮೂಹಿಕ ವಿವಾಹ ನಡೆಯಲಿದೆ.
ಕುರುವತ್ತಿ ಕ್ಷೇತ್ರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏ.25, ಮೇ 21, ಜೂ.17, ಜುಲೈ 1 ರಂದು ಸಾಮೂಹಿಕ ವಿವಾಹ ನಡೆಯಲಿದೆ. ಕುರುಗೋಡು ತಾಲೂಕಿನ ಶ್ರೀ ದೊಡ್ಡಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏ.22, ಮೇ 13, ಜೂ.13, ಜುಲೈ 7 ರಂದು ಸಾಮೂಹಿಕ ವಿವಾಹ ನಡೆಯಲಿದೆ.
ಹೊಸಪೇಟೆ ತಾಲೂಕಿನ ಶ್ರೀ ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಹಂಪಿದಲ್ಲಿ ಏ.19, ಮೇ 09, ಜೂ.27, ಜುಲೈ 7 ರಂದು ಸಾಮೂಹಿಕ ವಿವಾಹ ನಡೆಯಲಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಈ ಮಹತ್ವಾಕಾಂಕ್ಷಿ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಹೇಳಲಾಗಿದೆ.