ವಿಜಯಪುರ: ಕೊರೋನಾ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಸಪ್ತಪದಿ ಯೋಜನೆ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾರ್ಚ್ ನಿಂದ ಆರಂಭವಾಗಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳೆದ ವರ್ಷ ಸಪ್ತಪದಿ ಯೋಜನೆಗೆ ಸುಮಾರು 3000 ದಷ್ಟು ಅರ್ಜಿಗಳು ಬಂದಿದ್ದು, ಈ ಬಾರಿ ಅವುಗಳ ಸಂಖ್ಯೆ 6000 ಕ್ಕೂ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರತಿ ತಿಂಗಳು ಮೂರ್ನಾಲ್ಕು ಮುಹೂರ್ತ ನಿಗದಿಪಡಿಸಲಾಗುವುದು. ಈ ಮುಹೂರ್ತದಲ್ಲಿ ಮದುವೆ ಮಾಡಿಸಲು ಕ್ರಮಕೈಗೊಳ್ಳಲಾಗಿದೆ. 2 -3 ಜೋಡಿಗಳು ಇದ್ದರೂ ಕೂಡ ಆಯಾ ತಿಂಗಳು ಮುಹೂರ್ತ ನಿಗದಿಪಡಿಸಿ ಸಪ್ತಪದಿ ಯೋಜನೆಯಡಿ ಮದುವೆ ಮಾಡಿಸುವಂತೆ ತಿಳಿಸಲಾಗಿದೆ. ಅರ್ಹ ಫಲಾನುಭವಿಗಳ ಖಾತೆಗೆ 55 ಸಾವಿರ ರೂಪಾಯಿ ಹಣ ಜಮಾ ಮಾಡಲಾಗುವುದು. ಇದರಲ್ಲಿ ವರನಿಗೆ ಬಟ್ಟೆ ಖರೀದಿಗೆ 5000 ರೂ., ವಧುವಿಗೆ ಧಾರೆ ಸೀರೆ ಖರೀದಿಗೆ 10,000 ರೂ. ಮತ್ತು ಮಾಂಗಲ್ಯ ಖರೀದಿಗೆ 40 ಸಾವಿರ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.