ಬೆಂಗಳೂರು: 14 ಕ್ರಿಮಿನಲ್ ಪ್ರಕರಣ ಹೊತ್ತು ನಾಪತ್ತೆಯಾಗಿರುವ ಪ್ರಭಾವಿ ಸ್ಯಾಂಟ್ರೋ ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆದಾಯ ತೆರಿಗೆ ಇಲಾಖೆ, ಕಂದಾಯ ಇಲಾಖೆಗೆ ಮೈಸೂರಿನ ಒಡನಾಡಿ ಸಂಸ್ಥೆ ದೂರು ನೀಡಿದೆ.
ಆತನ ಬಳಿ ಇರುವ ಹಣ, ಅಕ್ರಮ ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ಹೊರನಾಡಿ ಸಂಸ್ಥೆಯ ಕೆವಿ ಸ್ಟ್ಯಾನ್ಲಿ, ಎಂಎಲ್ ಪರಶುರಾಮ್ ಪತ್ರ ಬರೆದು ಮನವಿ ಮಾಡಿದ್ದಾರೆ. ಹೆಣ್ಣುಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಮಾರಾಟ ಮಾಡುವುದು, ವರ್ಗಾವಣೆ ದಂಧೆ ಮೂಲಕ ಅಕ್ರಮ ಹಣ ಸಂಪಾದನೆ ಮಾಡಿದ್ದು, ಈತನ ಬಗ್ಗೆ ತನಿಖೆ ನಡೆಸಬೇಕು ಎಂದು ದೂರು ನೀಡಲಾಗಿದೆ.
ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ 1995ರಲ್ಲಿ ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ವಿರುದ್ಧ ಮೊದಲ ಪ್ರಕರಣ ದಾಖಲಾಗಿದ್ದು, ಇದುವರೆಗೂ 14 ಕ್ರಿಮಿನಲ್ ಪ್ರಕರಣಗಳು ಮೈಸೂರು, ಬೆಂಗಳೂರಿನಲ್ಲಿ ದಾಖಲಾಗಿವೆ.
2005 ರಲ್ಲಿ ಬೆಂಗಳೂರಿನ ಜೆಸಿ ನಗರ ಠಾಣೆಯಲ್ಲಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ಆರೋಪಿಯಾಗಿದ್ದ. ಈತನ ವಿರುದ್ಧ ತಿಲಕ್ ನಗರ, ಮೈಕೋ ಲೇಔಟ್, ಜಯನಗರ, ಸಂಜಯನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಮೈಸೂರಿನ ವಿಜಯನಗರ, ವಿದ್ಯಾರಣ್ಯಪುರ, ಇಲವಾಲ ಪೊಲೀಸ್ ಠಾಣೆಗಳಲ್ಲಿ ವೇಶ್ಯಾವಾಟಿಕೆ ಕೇಸ್ ಗಳಲ್ಲಿ ಈತ ಆರೋಪಿಯಾಗಿದ್ದ ಎಂದು ಹೇಳಲಾಗಿದೆ.
2005ರಲ್ಲಿ ಮೈಸೂರಿನಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದ ಸ್ಯಾಂಟ್ರೋ ರವಿ ಪೊಲೀಸರ ಕಣ್ಣು ತಪ್ಪಿಸಿ, ಕೆಲವೆಡೆ ಹಣ ಕೊಟ್ಟು ದಂಧೆ ಮುಂದುವರೆಸಿದ್ದ. ಎನ್ನಲಾಗಿದೆ. ಬೆಂಗಳೂರು, ಮೈಸೂರಿನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಈತ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದ.