ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಅಮ್ಮಿನಭಾವಿ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ, ಜಿಲ್ಲೆಯ ಮಳೆ ಹಾನಿ ಕುರಿತು ಹಾನಿಯಾದ ಮನೆಗಳಿಗೆ ಹಾಗೂ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಅವರು ರೈತರೊಂದಿಗೆ ಮಾತನಾಡಿ, ಬೆಳೆ ಹಾನಿ ಕುರಿತು ಪ್ರತಿ ರೈತರ ಜಮೀನುಗಳನ್ನು ತಪ್ಪದೇ ನಿಖರವಾಗಿ ಸಮೀಕ್ಷೆ ಮಾಡಿ, ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಕ್ಕೆ ಜಿಲ್ಲೆಯ ಬೆಳೆ ಹಾನಿ ಕುರಿತು ವಿಶೇಷ ವರದಿ ಸಲ್ಲಿಸಿ, ಪರಿಹಾರ ಪಡೆಯಲು ಕ್ರಮವಹಿಸಲಾಗುವುದು ಎಂದರು.
ಈ ವಾರವೂ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಕ್ಷಣ ಪರಿಹರಿಸಲು ಮತ್ತು ಗ್ರಾಮಗಳಲ್ಲಿಯ ಸ್ಥಾನಿಕ ಅಧಿಕಾರಿಗಳಿದ್ದು, ಜನರಿಗೆ ನೆರವಾಗಲು ಸೂಚಿಸಲಾಗಿದೆ. ಬೆಳೆ ನಷ್ಟ ಕುರಿತು ಬೇಗ ವರದಿ ಸಿದ್ದಪಡಿಸಲು ಹಾಗೂ ವಿಮೆ ಮಾಡಿರುವ ರೈತರಿಗೆ ತಕ್ಷಣದ ಪರಿಹಾರ ಸಿಗುವಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ರೈತರು ಅಕಾಲಿಕ ಮತ್ತು ಅತಿಯಾದ ಮಳೆಯಿಂದ ಆಗುವ ನಷ್ಟದಿಂದ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಮಾಡಿಸಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೆಳೆ ಆ್ಯಪ್ ಹಾಗೂ ಬೆಳೆ ವಿಮೆ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಮನೆ ಹಾನಿ:
ನಿರಂತರ ಮಳೆಯಿಂದಾಗಿ ತೀವ್ರ ಹಾನಿಗೆ ಒಳಗಾಗಿರುವ ಅಮ್ಮಿನಭಾವಿಯ ಮಡಿವಾಳಪ್ಪ. ಹನಮಂತಪ್ಪ. ಭೋವಿ ಅವರ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಚಿವರು ಪರಿಶೀಲಿಸಿದರು. ಮನೆ ಹಾನಿ ಕುರಿತು ಭೋವಿ ಕುಟುಂಬದಿಂದ ಮಾಹಿತಿ ಪಡೆದು, ನಿಯಮಾನುಸಾರ ಅಧಿಕಾರಿಗಳು ಪರಿಹಾರ ವಿತರಿಸುವ ಬಗ್ಗೆ ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.
ತಹಶೀಲ್ದಾರ ಡಿ.ಹೆಚ್.ಹೂಗಾರ ಅವರು ಮಳೆಯಿಂದಾಗಿ ಗ್ರಾಮದಲ್ಲಿ ಒಟ್ಟು 14 ಮನೆಗಳು ಹಾನಿಯಾಗಿವೆ ಎಂದು ತಿಳಿಸಿದರು.
ಈರುಳ್ಳಿ ಬೆಳೆ ಹಾನಿ:
ಅಕಾಲಿಕ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಅಮ್ಮಿನಭಾವಿ ಗ್ರಾಮದ ರೈತ ಬಸಪ್ಪ.ಧರ್ಮಪ್ಪ.ರಸಾಳೆ ಅವರ ಈರುಳ್ಳಿ ತೋಟಕ್ಕೆ ಭೇಟಿ ನೀಡಿದ ಸಚಿವರು ಸ್ವತಃ ಈರುಳ್ಳಿ ಬೆಳೆ ಹಾಳಾಗಿರುವುದನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತ ಬಸಪ್ಪ ಮಾತನಾಡಿ, ತಮ್ಮ ಪಾಲಿಗೆ ಇರುವ ಎರಡು ಎಕರೆ ಜಮೀನುದಲ್ಲಿ ಮಳೆ ಆಶ್ರಿತ ಬೆಳೆಯಾಗಿ ಈರುಳ್ಳಿಯನ್ನು ಬೆಳೆದಿದ್ದೇನೆ. ಕೊಯ್ಲಿಗೆ ಬಂದ ಸಮಯದಲ್ಲಿ ಈ ಮಳೆಯಿಂದಾಗಿ ಭೂಮಿಯಲ್ಲಿಯೇ ಈರುಳ್ಳಿ ಕೊಳೆಯುತ್ತಿದೆ. ಇದರಿಂದ ನನಗೆ ತುಂಬಾ ನಷ್ಟವಾಗಿದ್ದು, ಪರಿಹಾರ ದೊರಕಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಹತ್ತಿ ಬೆಳೆ ಹಾನಿ: ಅಮ್ಮಿನಭಾವಿ ಗ್ರಾಮದ ರೈತ ಮಹಿಳೆ ಫಕ್ಕಿರವ್ವಾ. ಮರಬಸಪ್ಪ. ಯಡಳ್ಳಿ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆ ಕೊಯ್ಲಿಗೆ ಬಂದಿದ್ದು, ಮಳೆಯಿಂದಾಗಿ ಗಿಡದಲ್ಲಿಯೇ ಹತ್ತಿ ಹಾಳಾಗಿದೆ. ಮುಂದಿನ ಬಿತ್ತನೆಗಾಗಿ ಸಹಾಯ ಮಾಡುವಂತೆ ತಮ್ಮ ಹತ್ತಿ ಹೊಲಕ್ಕೆ ಭೇಟಿ ನೀಡಿದ್ದ ಸಚಿವರಲ್ಲಿ ವಿನಂತಿಸಿದರು.