
ಗದಗ: ದೇಶದ ಅಭಿವೃದ್ಧಿಗಾಗಿ ಮೋದಿಯವರು ತಮ್ಮ ಪ್ರಧಾನಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಡಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಧ್ವನಿಯೆತ್ತಬೇಕು ಎಂದು ಕರಮಿಕ ಸಚಿವ ಸಂತೋಷ್ ಲಾಡ್ ಒತ್ತಾಯಿಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ದೇಶದ ಪರಿಸ್ಥಿತಿ ದುಸ್ಥಿತಿಯಲ್ಲಿದೆ. ಪ್ರಧಾನಿ ಹುದ್ದೆಯಲ್ಲಿರೋ ಮೋದಿಯವರಿಂದ ದಿವಾಳಿಯತ್ತ ಸಾಗುತ್ತಿದೆ. ನಿತೀನ್ ಗಡ್ಕರಿಯಂತಹ ಸೂಕ್ತರೂ ಪ್ರಧಾನಿ ಹುದ್ದೆಗೆ ಅರ್ಹರಿದ್ದಾರೆ. ದೇಶದ ಹಿತದೃಷ್ಟಿಯಿಂದ ಮೋದಿಯವರು ಬೇರೆಯವರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಡುವಂತೆ ಬಿಜೆಪಿ ಕಾರ್ಯಕರ್ತರಾದಿಯಾಗಿ ಮುಖಂಡರು ಧ್ವನಿಯೆತ್ತಬೇಕು ಎಂದು ಹೇಳಿದರು.
ರಾಜ್ಯದ ದೇಶದ ಸಮಸ್ಯೆಗಳ ವಿಷಯಗಳಿಗೆ ಹೆಚ್ಚು ಆದ್ಯತೆ ಕೊಡಬೇಕೇ ವಿನಃ ಸಚಿವ ಸಂಪುಟ ಸರ್ಜರಿ ವಿಷಯಕ್ಕೆ ಅಲ್ಲ. ಜನರ ಸಮಸ್ಯೆಗಳಿಗಿಂತ ಅಭಿವೃದ್ಧಿಗಿಂತ ಸಚಿವ ಸಂಪುಟದ ವಿಷಯವೇನೂ ಮಹತ್ವದ್ದಲ್ಲ ಎಂದರು.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಾಜಣ್ಣ ಹೇಳಿಕೆ ವಿಚಾರ ಅವರವರಿಗೆ ಬಿಟ್ಟಿದ್ದು. ಯಾರು ಹೊಸ ಸಿಎಂ ವಿಚಾರ ತೇಲಿಬಿಟ್ಟಿದ್ದಾರೆ ಅವರನ್ನೇ ಸುದ್ದಿಗಾರರು ಪ್ರಶ್ನಿಸಬೇಕೇ ಹೊರತು ಬೇರೆಯವರನ್ನಲ್ಲ. ನನಗೆ ಸಂಬಂಧವಿಲ್ಲದ ಅಥವಾ ತಿಳಿಯದೇ ಇರುವ ವಿಚಾರದ ಬಗ್ಗೆ ನಾನು ಮಾತನಾಡಲ್ಲ, ನಾನು ಯಾರ ಪರವೂ ಅಲ್ಲ, ವಿರೋದವೂ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಪರಅಷ್ಟೇ ಎಂದು ಹೇಳಿದರು.
ಮಹಾಕುಂಭಮೇಳದಲ್ಲಿ ಹಲವರ ಸಾವು ಸಂಭವಿಸಿದೆ. ಈ ಘಟನೆ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು. ಕುಂಭಮೇಳದಿಂದ ಸಾವಿರಾರು ಜನರಿಗೆ ಅನಾನುಕೂಲವೂ ಆಗಿದೆ. ಕುಂಭಮೇಳದಲ್ಲಿ ಸಂಭವಿಸಿದ ಅವಘಡಗಳ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ನೆರವಾಗಬೇಕು ಎಂದು ಹೇಳಿದರು.