ಬೆಳಗಾವಿ: ಉಡುಪಿಯ ಲಾಡ್ಜ್ ವೊಂದರಲ್ಲಿ ಮೃತಪಟ್ಟ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪ್ರಕರಣದ ತನಿಖೆಯ ದಾರಿ ತಪ್ಪಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣದ ಕುರಿತು ಪಾರದರ್ಶಕ ತನಿಖೆ ನಡೆಸಲು ಕ್ರಮ ತೆಗೆದುಕೊಳ್ಳಬೇಕೆಂದು ಸಂತೋಷ್ ಪಾಟೀಲ ಅವರ ಪತ್ನಿ ರೇಣುಕಾ ಪಾಟೀಲ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಳೆದ ಏಪ್ರಿಲ್ 12 ರಂದು ಪತಿ ಸಂತೋಷ್ ಪಾಟೀಲ ಸಾವು ಸಂಭವಿಸಿದ್ದು, ಅನುಮಾನಾಸ್ಪದವಾಗಿದ್ದರಿಂದ ಶಾಸಕ ಕೆ.ಎಸ್. ಈಶ್ವರಪ್ಪ ವಿರುದ್ಧ ಏಪ್ರಿಲ್ 13 ರಂದು ಉಡುಪಿ ಪೊಲೀಸರಿಗೆ ದೂರು ನೀಡಿದ್ದೇನೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ನಮ್ಮ ಕುಟುಂಬಕ್ಕೆ ಆತಂಕ ಉಂಟಾಗಿದ್ದು, ಇದರಲ್ಲಿ ಪ್ರಮುಖ ಆರೋಪಿ ಕೆ.ಎಸ್. ಈಶ್ವರಪ್ಪ ಪ್ರಭಾವಿ ನಾಯಕರಾಗಿದ್ದಾರೆ. ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ ಎಂದು ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ.
ಆರೋಪ ಮುಕ್ತನಾಗಿ 15 ದಿನಗಳಲ್ಲಿ ಹೊರ ಬರುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದ್ದರೂ, ಅವರು ಇಷ್ಟೊಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿರುವುದು ಸಂಶಯಾಸ್ಪದವಾಗಿದೆ. ತಮ್ಮ ರಾಜಕೀಯ ಪ್ರಭಾವ ಮತ್ತು ಹಣ ಬಳಸಿ ಪ್ರಕರಣ ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದು, ಪಾರದರ್ಶಕ ತನಿಖೆ ನಡೆಸಲು ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.