ಧಾರವಾಡ: ಪ್ರತಿ ವರ್ಷ ಮಳೆಗಾಲದಲ್ಲಿ ಅಳ್ನಾವರ ತಾಲೂಕಿನ ಕಂಬಾರಗಣವಿ ಸಂಪರ್ಕದ ಸೇತುವೆ ಮುಚ್ಚಿ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಇದರ ಪರಿಹಾರಕ್ಕಾಗಿ 1.5 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಅವರು ಇಂದು ಬೆಳಿಗ್ಗೆ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸಂಪರ್ಕ ಸೇತುವೆಗೆ ಭೇಟಿ ನೀಡಿ, ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಂಬಾರಗಣವಿ ಗ್ರಾಮವು ಅರಣ್ಯ ಪ್ರದೇಶದಲ್ಲಿ ಇರುವ ಗ್ರಾಮವಾಗಿದ್ದು, ನಿರಂತರವಾಗಿ ಮಳೆ ಆದರೆ ಸುತ್ತಲಿನ ಮಳೆ ನೀರು ಇದೇ ಸೇತುವೆ ಮೂಲಕ ಹೋಗುತ್ತದೆ. ಈ ಸೇತುವೆಯನ್ನು ಸುಮಾರು 5 ಮೀಟರ್ ಎತ್ತರಕ್ಕೆ ನಿರ್ಮಿಸಲು ಆದೇಶಿಸಲಾಗಿದೆ. 30 ಮೀಟರ್ ಉದ್ದದ ಮತ್ತು 5 ಮೀಟರ್ ಅಗಲದ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಿದ್ದು, ಸ್ವಲ್ಪ ಮಳೆ ಕಡಿಮೆ ಆದ ತಕ್ಷಣ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ 62 ಅಂಗನವಾಡಿಗಳ ದುರಸ್ತಿ, ನೂತನ ಕಟ್ಟಡಕ್ಕೆ ಕ್ರಮ:
ಕುಂಬಾರಗಣವಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕಳೆದ ವರ್ಷ ನೂತನ ಕಟ್ಟಡ ನೀಡಲಾಗಿದೆ. ಕಟ್ಟಡದ ಸುತ್ತ ಮಳೆ ನೀರು ಸಂಗ್ರಹವಾಗುತ್ತಿದ್ದು, ಇದ್ದನ್ನು ತೆರವುಗೊಳಿಸಿ ಕಟ್ಟಡದ ಸುತ್ತ ಆವರಣ ಗೊಡೆ ನಿರ್ಮಿಸಲು ನೂತನ ಕಾಮಗಾರಿ ಕೈಗೊಳ್ಳಲು ಕಾರ್ಯಾದೇಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯ ಎಲ್ಲ ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ಸಾಮರ್ಥ್ಯ ಹಾಗೂ ಬಳಸಲು ಯೋಗ್ಯವಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಸಮೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಿಥಿಲಗೊಂಡ 62 ಅಂಗನವಾಡಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 19 ಕಟ್ಟಡಗಳ ದುರಸ್ತಿಗೆ ಕ್ರಮವಹಿಸಲಾಗಿದೆ. 32 ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಮತ್ತು 11 ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ ಎಂದು ಹೇಳಿದರು.
ಅಪಾಯದ ಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಗಳ ಬದಲಿಗೆ ಬೇರೆ ಕಟ್ಟಡಗಳಲ್ಲಿ ಮಕ್ಕಳ ಕಲಿಕೆಗೆ ಅವಕಾಶ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದು ಅದರಂತೆ ಕ್ರಮವಹಿಸಿ ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ 136 ಶಾಲೆಗಳ 1135 ಕೊಠಡಿಗಳ ದುರಸ್ತಿಗೆ ಕ್ರಮ:
ಜಿಲ್ಲೆಯಲ್ಲಿ ಒಟ್ಟು 763 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 111 ಸರ್ಕಾರಿ ಪ್ರೌಢಶಾಲೆಗಳಿದ್ದು, ಇವುಗಳ ಪೈಕಿ 126 ಪ್ರಾಥಮಿಕ ಹಾಗೂ 10 ಪ್ರೌಢಶಾಲೆಗಳ ಸುಮಾರು 1135 ಕೊಠಡಿಗಳನ್ನು ದುರಸ್ತಿ ಹಾಗೂ ಕೆಲವು ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರದ ಅನುದಾನ ಉಪಯೋಗಿಸಿಕೊಂಡು 64 ಶಾಲೆಗಳ 177 ಕೊಠಡಿಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಮತ್ತು ಎನ್‍ಡಿಆರ್‍ಎಫ್ ಅಡಿಯಲ್ಲಿ ಬಿಡುಡೆಯಾದ ಅನುದಾನದಲ್ಲಿ 261 ಶಾಲೆಗಳ 724 ಕೊಠಡಿಗಳ ದುರಸ್ತಿಗೆ ಕ್ರಮಕೈಗೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಶಿಥಿಲ ಕಟ್ಟಡದ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲಿಸಿ ಕ್ರಮವಹಿಸಲು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.