ದಾವಣಗೆರೆ : ರಾಜ್ಯದಲ್ಲಿರುವ ಲಂಬಾಣಿ ಜನಾಂಗ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಈ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರು ತಿಳಿಸಿದರು.
ಅವರು ಬುಧವಾರ ನ್ಯಾಮತಿ ತಾಲ್ಲೂಕಿನ ಭಾಯಗಡ್-ಸೂರಗೊಂಡನಕೊಪ್ಪದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಆಡಳಿತ, ತಾಂಡಾ ಅಭಿವೃದ್ದಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಹಣಾ ಪ್ರತಿಷ್ಠಾಪನ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂತ ಸೇವಾಲಾಲ್ ರವರು 17, 18ನೇ ಶತಮಾನದಲ್ಲಿ ಅಹಿಂಸಾ ತತ್ವ, ಶಾಂತಿ ಸಂಕೇತವನ್ನು ಪ್ರತಿಪಾದಿಸಿದವರು. ಅಲೆಮಾರಿಯಾಗಿದ್ದ ಈ ಜನರ ನೆಲೆಗೊಂಡು ಸಾಂಸ್ಕøತಿಕತೆ ಮತ್ತು ಆರ್ಥಿಕ ಮುನ್ನಡೆಯಲ್ಲಿ ಸಂತ ಸೇವಾಲಾಲ್ ರವರ ಪಾತ್ರ ಪ್ರಮುಖವಾಗಿದೆ. ಬಂಜಾರ ಸಾಂಪ್ರದಾಯಿಕತೆ, ಮೌಖಿಕ ಸಾಹಿತ್ಯ, ವೇಷಭೂಷಣ, ಕಲೆ ಸಂರಕ್ಷಣೆ ಮಾಡಲು ಬದ್ಧವಾಗಿದೆ. ಈ ಜನಾಂಗದ ಸಂಘಟನೆಯಲ್ಲಿ ಪ್ರಮುಖವಾಗಿರುವ ಸೇವಾಲಾಲರು ಸೂರಗೊಂಡನಕೊಪ್ಪದಲ್ಲಿ ಹುಟ್ಟಿರುವುದು ಪುಣ್ಯಭೂಮಿಯಾಗಿದೆ ಎಂದರು.
ಸೂರಗೊಂಡನಕೊಪ್ಪ ಅಭಿವೃದ್ದಿಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಲಾಗಿದೆ. ಇದೇ ರೀತಿ ತಮ್ಮ ಮಕ್ಕಳಿಗೂ ಶಿಕ್ಷಣ ಕೊಡಿಸುವ ಮೂಲಕ ಆಸ್ತಿವಂತರನ್ನಾಗಿ ಮಾಡಲು ಸಲಹೆ ನೀಡಿದರು.
ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಭಾಗವಹಿಸಬೇಕಿತ್ತು, ಕಾರಣಾಂತರದಿಂದ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ತಮ್ಮ ಸಂದೇಶದಲ್ಲಿ ರಾಜ್ಯ ಸರ್ಕಾರ ಲಂಬಾಣಿ ಜನಾಂಗದ ಸರ್ವಾಗಿಂಣ ಅಭಿವೃದ್ದಿಗೆ ಎಲ್ಲಾ ಕ್ರಮ ಕೈಗೊಳ್ಳಲಿದ್ದು ನಿಮ್ಮ ಜೊತೆ ಇರಲಿದೆ ಎಂದರು.
ಸೂರಗೊಂಡನಕೊಪ್ಪದಲ್ಲಿ ಶಾಲಾ, ಕಾಲೇಜು ಸ್ಥಾಪನೆ, ಇಲ್ಲಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ನಿಮ್ಮ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವೆ ಎಂದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಲಂಬಾಣಿ ಜನಾಂಗದೊಂದಿಗೆ ನಿಕಟ ಸಂಪರ್ಕವಿತ್ತು ಮತ್ತು ಈ ಜನರ ಅಭಿವೃದ್ದಿಗೆ, ಬಡತನ ನಿವಾರಣೆಗೆ ಅವರಲ್ಲಿ ತುಡಿತವಿತ್ತು ಎಂದರು.