ಆರೋಗ್ಯ ಕಾಪಾಡಲು ಅಮೃತ ಸಂಜೀವಿನಿಯಂತೆ ಕೆಲಸ ಮಾಡುವ ಹಲವಾರು ಸೊಪ್ಪುಗಳು ನಮಗೆ ಪ್ರಕೃತಿಯಲ್ಲಿ ದೊರೆಯುತ್ತವೆ. ಅವುಗಳಲ್ಲಿ ಕೆಲವು ಇಲ್ಲಿವೆ.
ಅಮೃತಬಳ್ಳಿ ಇದರ ಹೆಸರು ಚಿರಪರಿಚಿತ. ಹೆಸರೇ ಹೇಳುವಂತೆ ಇದು ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಎಲೆಗಳನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ನೆಗಡಿ, ಕೆಮ್ಮು ವಾಸಿಯಾಗುತ್ತದೆ. 1 ಚಮಚದಷ್ಟು ಅಮೃತಬಳ್ಳಿಯ ರಸವನ್ನು ದಿನಕ್ಕೆ 2 ಬಾರಿ ಕುಡಿಯುತ್ತಾ ಬಂದರೆ ಮೂಲವ್ಯಾಧಿ ನಿಯಂತ್ರಣದಲ್ಲಿರುವುದು. ಜ್ವರಕ್ಕೆ ಅಮೃತಬಳ್ಳಿ ಉತ್ತಮ ಟಾನಿಕ್ ನಂತೆ ಕೆಲಸ ಮಾಡುತ್ತದೆ.
ಪುಟ್ಟ ಸಸ್ಯ ಪುದೀನಾ, ಉತ್ತಮ ಸುವಾಸನೆಯನ್ನು ಹೊಂದಿದ್ದು, ಆಹಾರ ತಯಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಪುದೀನಾ ಎಲೆಗಳನ್ನು ಬಳಸಿ ಚಟ್ನಿ, ತಂಬುಳಿ, ಪಲಾವ್ ತಯಾರಿಸುತ್ತಾರೆ. ಇದರ ಸೇವನೆಯಿಂದ ರಕ್ತ ಶುದ್ದಿಯಾಗುತ್ತದೆ. ಜೀರ್ಣಶಕ್ತಿ ವೃದ್ದಿಯಾಗುತ್ತದೆ. ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ ಮಖಕ್ಕೆ ಹಚ್ಚುವುದರಿಂದ ಮೊಡವೆ ನಿವಾರಣೆಯಾಗುತ್ತದೆ. ಪುದೀನಾ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುವುದಲ್ಲದೇ ವಸಡು, ಹಲ್ಲುಗಳು ಆರೋಗ್ಯವಾಗಿರುವುದು.