ಬೆಂಗಳೂರು: 3 ವರ್ಷದ ಮಗುವಿಗೆ ಅವಧಿ ಮೀರಿದ ಇಂಜಕ್ಷನ್ ನೀಡಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂರು ವರ್ಷದ ಯಾದ್ವಿ ಎಂಬ ಮಗು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಸಂಜೀವಿನಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಮಗು ತೀವ್ರ ಸುಸ್ತಿನಿಂದ ಬಳಲುತ್ತಿದೆ ಎಂದು ವೈದ್ಯರು, ನರ್ಸ್ ಇಂಜಕ್ಷನ್ ಹಾಗೂ ಡ್ರಿಪ್ ಹಾಕಿದ್ದರು.
ಡ್ರಿಪ್ ಹಾಕುತ್ತಿದ್ದಂತೆ ಮಗುವಿನ ತುಟಿ ಊದಿ ರಕ್ತ ಬರಲಾರಂಭಿಸಿದೆ. ಮಗುವಿನ ಸ್ಥಿತಿ ಗಂಭೀರವಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ವೈದ್ಯರು ಸಮಜಾಯಿಷಿ ನೀಡಿದ್ದರು. ತಕ್ಷಣ ಪೋಷಕರು ಮಗುವನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಈ ನಡುವೆ ಮಗುವಿನ ತಂದೆ ಕಿರಣ್ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜೀವಿನಿ ಆಸ್ಪತ್ರೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸಹನಾ ಮಗುವಿಗೆ ಅವಧಿ ಮೀರಿದ ಇಂಜಕ್ಷನ್ ನೀಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಸಂಬಂಧಪಟ್ಟ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.