
ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು ಉಪಕಾರಿ. ಬಾಳೆ ಹೂವು ಎ, ಇ, ಸಿ ಜೀವಸತ್ವವಷ್ಟೇ ಅಲ್ಲದೆ ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನೇಶಿಯಂ ಮುಂತಾದ ಪೋಷಕಾಂಶಗಳಿಂದ ಶ್ರೀಮಂತವಾಗಿದೆ.
ಸ್ತ್ರೀಯರ ಪಾಲಿಗಂತು ಬಾಳೆಹೂವು ಸಂಜೀವಿನಿ ಎಂದೇ ಹೇಳಬಹುದು. ಬಾಳೆಹೂವಿನ ರಸ ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ, ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚುತ್ತದೆ.
ಮೂತ್ರಪಿಂಡದ ಕಾರ್ಯಕ್ಷಮತೆ ಹೆಚ್ಚುತ್ತದೆ. ಗರ್ಭಾಶಯಕ್ಕೆ ಶಕ್ತಿ ಕೊಡುತ್ತದೆ. ಸ್ತನ್ಯಪಾನ ಮಾಡಿಸುವ ತಾಯಂದಿರಲ್ಲಿ ಹಾಲನ್ನು ಹೆಚ್ಚಿಸುತ್ತದೆ. ಆಮಶಂಕೆ ಬಿಳಿಸೆರಗಿನ ಸಮಸ್ಯೆ ಇದ್ದವರು ಬಾಳೆ ಹೂವಿನ ರಸಕ್ಕೆ ಮಜ್ಜಿಗೆ ಬೆರೆಸಿ ಕುಡಿಯುವುದು ಬಹಳ ಒಳ್ಳೆಯದು.