ಶಿವ ಸೇನಾ ವಕ್ತಾರ ಸಂಜಯ್ ರವತ್ ಇತ್ತೀಚೆಗೆ ಮಧ್ಯಮವೊಂದರ ಮೈಕ್ ಮೇಲೆ ಉಗುಳಿದ ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಭಾರೀ ವಿವಾದಕ್ಕೆ ಗ್ರಾಸವಾಗಿದ್ದಾರೆ.
ಜನಪ್ರತಿನಿಧಿಯೊಬ್ಬರು ಈ ರೀತಿಯ ವರ್ತನೆಗಳನ್ನು ತೋರುವುದು ಉಚಿತವಲ್ಲ ಎಂದು ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರೌತ್, “ಅಣೆಕಟ್ಟೆಯಲ್ಲಿ ಮೂತ್ರವಿಸರ್ಜನೆ ಮಾಡುವುದಕ್ಕಿಂತ ಉಗುಳುವುದು ವಾಸಿ,” ಎಂದು ಭಂಡತನ ಮೆರೆದಿದ್ದರು. ರೌತ್‌ರ ಈ ವರ್ತನೆಗೆ ಪಕ್ಷಾತೀತವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇಷ್ಟೆಲ್ಲಾ ಆದರೂ ಸಹ, “ಉಗುಳುವುದರ ಮೇಲೆ ಎಲ್ಲಾದರೂ ನಿಷೇಧ ಹೇರಿದ್ದಾರಾ?,” ಎಂದು ಮತ್ತೆ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದರು ರೌತ್.
“ಮಹಾರಾಷ್ಟ್ರವು ಸಂಸ್ಕೃತಿ ಹಾಗೂ ಪರಂಪರೆಗಳನ್ನು ಹೊಂದಿದೆ. ಎಲ್ಲಾ ನಾಯಕರು ಇದನ್ನು ಪಾಲಿಸುತ್ತಾರೆ ಎಂದು ಭಾವಿಸಿದ್ದೇನೆ,’’ ಎಂದು ಅಜಿತ್ ಪವಾರ್ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರೌತ್, “ಇದೇ ಅಜಿತ್ ಪವಾರ್ ಅಣೆಕಟ್ಟೆಗಳಲ್ಲಿ ನೀರಿಲ್ಲ ಎಂದು ಕೇಳಿದ್ದಕ್ಕೆ ನಾನೇನು ಅಲ್ಲಿಗೆ ಹೋಗಿ ಮೂತ್ರವಿಸರ್ಜನೆ ಮಾಡಿ ನೀರು ತುಂಬಲೇ ಎಂದ ಹೇಳಿದ್ದಕ್ಕಿಂತ ಇದು ವಾಸಿ,” ಎಂದಿದ್ದರು.
ಮಹಾರಾಷ್ಟ್ರದಲ್ಲಿ ಬಿಜೆಪಿ – ಏಕ್‌ನಾಥ್ ಶಿಂಧೆರ ಶಿವಸೇನಾ ಬಣದ ಸರ್ಕಾರ ರಚನೆಯಾದ ದಿನದಿಂದ ಸರ್ಕಾರದ ವಿರುದ್ಧ ಟೀಕಿಸುವ ಭರದಲ್ಲಿ ಸಂಜಯ್ ರೌತ್ ತೀರಾ ಕೆಳಮಟ್ಟದ ಭಾಷಾ ಪ್ರಯೋಗ ಮಾಡುತ್ತಿದ್ದಾರೆ ಎಂದು ವ್ಯಾಪಕವಾದ ಟೀಕೆಗಳು ಹರಿದು ಬಂದಿವೆ.
ಶಿವ ಸೇನಾದ ಶಿಂಧೆ ಬಣದ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ರೌತ್ ಮೈಕ್ ಮೇಲೆ ಉಗುಳಿದ್ದು, ’ಅದುವೇ ತಮ್ಮ ಪ್ರತಿಕ್ರಿಯೆ’ ಎಂದಿದ್ದರು.