ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಡಬಲ್ಸ್ ನಂ1 ಸಾನಿಯಾ ಮಿರ್ಜಾ ಫೆಬ್ರವರಿ 19 ರಂದು ಪ್ರಾರಂಭವಾಗುವ ಡಬ್ಲ್ಯುಟಿಎ 1000 ಈವೆಂಟ್ ದುಬೈ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ವೃತ್ತಿಪರ ಟೆನಿಸ್ನಿಂದ ನಿವೃತ್ತಿಯಾಗುವ ಯೋಜನೆಯನ್ನು ಖಚಿತಪಡಿಸಿದ್ದಾರೆ.
36 ವರ್ಷದ ಮಿರ್ಜಾ ಆರಂಭದಲ್ಲಿ ಕಳೆದ ಋತುವಿನ ಕೊನೆಯಲ್ಲಿ ವೃತ್ತಿ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಮೊಣಕೈ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿ ಘೋಷಣೆಯನ್ನು ಮುಂದೂಡಿದ್ದರು.
ಆರು ಬಾರಿ ಪ್ರಮುಖ ಚಾಂಪಿಯನ್ ಆಗಿರುವ ಸಾನಿಯಾ ಮಿರ್ಜಾ ಡಬಲ್ಸ್ನಲ್ಲಿ ಮೂರು ಮತ್ತು ಮಿಶ್ರ ಡಬಲ್ಸ್ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮಿರ್ಜಾ ಅವರು ಈ ತಿಂಗಳ ಆಸ್ಟ್ರೇಲಿಯನ್ ಓಪನ್ನಲ್ಲಿ ಕಜಕಿಸ್ತಾನ್ನ ಅನ್ನಾ ಡ್ಯಾನಿಲಿನಾ ಅವರೊಂದಿಗೆ ಸ್ಪರ್ಧಿಸಲು ಸಹಿ ಹಾಕಿದ್ದಾರೆ.
ಕಳೆದ ಡಬ್ಲ್ಯುಟಿಎ ಫೈನಲ್ಸ್ ಬಳಿಕ ನಾನು ನನ್ನ ವೃತ್ತಿ ಜೀವನವನ್ನು ನಿಲ್ಲಿಸಬೇಕಾಗಿತ್ತು. ಆದರೆ, ಗಾಯದಿಂದಾಗಿ ಯುಎಸ್ ಓಪನ್ ಹಾಗೂ ಇನ್ನಿತರೆ ಟೂರ್ನಿಗಳಿಂದ ಹೊರಗುಳಿಯಬೇಕಾಗಿತ್ತು. ನಾನು ನನ್ನ ಸ್ವಂತ ನಿರ್ಧಾರಗಳ ಮೇಲೆ ನಿಲ್ಲುವ ವ್ಯಕ್ತಿಯಾಗಿದ್ದೇನೆ. ಈ ಕಾರಣದಿಂದಾಗಿ ನಾನು ಗಾಯದಿಂದ ಗುಣಮುಖಳಾಗಿ ಮರಳಿ ತರಬೇತಿ ಪಡೆದುಕೊಂಡಿದ್ದೇನೆ ಎಂದು ಡಬ್ಲ್ಯುಟಿಎ ಟೂರ್ ವೆಬ್ಸೈಟ್ನಲ್ಲಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.
ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ನ ಮದುವೆಯಾಗಿರುವ ಸಾನಿಯಾ ಮಿರ್ಜಾ 10 ವರ್ಷಕ್ಕೂ ಹೆಚ್ಚು ಸಮಯದಿಂದ ದುಬೈನಲ್ಲಿ ನೆಲೆಸಿದ್ದಾರೆ. 4 ವರ್ಷದ ಬಾಲಕ ಇಜಾನ್ನ ತಾಯಿ ಮಿರ್ಜಾ ಇತ್ತೀಚೆಗೆ ದುಬೈನಲ್ಲಿ ಟೆನಿಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ಇದು ಈಗಾಗಲೇ ಮೂರು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.