
ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಹಿಂದ ಸಂಘಟನೆಗೆ ಮತ್ತೆ ಚಾಲನೆ ನೀಡುವ ಕುರಿತಾಗಿ ಮಹತ್ವದ ಸಭೆ ನಡೆಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸ್ವೀಕರಿಸಲು ಗುರುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಈಶ್ವರಪ್ಪ ಅನೇಕ ಮುಖಂಡರೊಂದಿಗೆ ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್, ಹಿಂದ ಸಂಘಟನೆಗೆ ಮತ್ತೆ ಚಾಲನೆ ನೀಡುವ ಕುರಿತಾಗಿ ಚರ್ಚೆ ನಡೆಸಿದ್ದಾರೆ.
ಮತ್ತೆ ಆರಂಭಿಸಲಿರುವ ಬ್ರಿಗೇಡ್ ಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರನ್ನು ಮುಂದುವರೆಸಬೇಕೆ ಅಥವಾ ಹೊಸದಾಗಿ ಹಿಂದ್ ಹೆಸರು ಇಡಬೇಕೇ ಎನ್ನುವ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಹಿಂದುಳಿದವರು ದಲಿತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಗೆ ಮರುನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಸೆ.22ರಂದು ವಿಜಯಪುರದಲ್ಲಿ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಪ್ರಮುಖರ ಸಭೆ ನಡೆಸಿ ಸಂಘಟನೆ ಹೆಸರಿನ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ನಂತರದಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಜಿಲ್ಲೆಗಳ ಪ್ರಮುಖರ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.