ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ನನಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಸೌಜನ್ಯಕ್ಕಾದರೂ ರಾಜ್ಯದ ಒಬ್ಬ ಬಿಜೆಪಿ ನಾಯಕರೂ ಕರೆ ಮಾಡಿ ಮಾತನಾಡಿಲ್ಲ. ಅವರು ನನ್ನನ್ನು ಗುಜರಿ ರಾಜಕಾರಣಿ ಎಂದು ಭಾವಿಸಿದ್ದಾರೆಯೇ ಎಂದು ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದ್ದಾರೆ.
ಗಿಣಿಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಣ್ಣ ಕರಡಿ, ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರೂ ಯಾಕೆ ಒಬ್ಬ ನಾಯಕರೂ ಕರೆ ಮಾಡಿಲ್ಲ. ಏಕೆ ಟಿಕೆಟ್ ತಪ್ಪಿದೆ? ಯಾರು ತಪ್ಪಿಸಿದರು ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕೇ ಬೇಕು. ಆ ನಂತರವೇ ನಾನು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ರಾಜಕೀಯವಾಗಿ ನಿವೃತ್ತಿಯಾಗುವುದಿಲ್ಲ ಎಂದು ಗುಡುಗಿದ ಸಂಗಣ್ಣ ತಮ್ಮ ಮುಂದಿನ ನಡೆ ಏನು ಎಂಬ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆಕ್ರೋಶದ ಬಳಿಕ ರಾಜ್ಯ ಬಿಜೆಪಿಯ ಕೆಲವು ನಾಯಕರು ಸಂಗಣ್ಣರಿಗೆ ಕರೆ ಮಾಡಿದ್ದಾರೆ. ಆದರೆ ಅವರು ಸ್ವೀಕರಿಸಿಲ್ಲ. ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಕರೆದರೂ ಹೋಗದೇ ತಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರ ಬರುತ್ತೇನೆ ಎಂದು ಹೇಳಿದ್ದಾರೆ.