ಸಂಡೂರು: ಅನ್ನಪೂರ್ಣಮ್ಮ ಅವರು ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರದ ಯಶವಂತನಗರ ಗ್ರಾಮದಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಈಗ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ತೀವಿ. ಯಶವಂತನಗರದ ಪುತ್ರ ಈ.ತುಕಾರಾಮ್ ಅವರು ನಿಮ್ಮ ಬೆಂಬಲದೊಂದಿಗೆ ಲೋಕಸಭಾ ಸದಸ್ಯರಾಗಿದ್ದಾರೆ. ಈಗ ಈ ಊರಿನ ಸೊಸೆ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿಕೊಡಿ. ಈ ಇಬ್ಬರೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ ಎಂದರು.
ಈ.ತುಕಾರಾಮ್ ಅಭಿವೃದ್ಧಿಯಲ್ಲಿ ನಿಸ್ಸೀಮ. ನನ್ನಿಂದ, ಎಲ್ಲಾ ಮಂತ್ರಿಗಳಿಂದ ಸಜ್ಜನಿಕೆಯಿಂದಲೇ ಕೆಲಸ ಮಾಡಿಸಿಕೊಳ್ಳುವ ಕಲೆ, ಕಾಳಜಿ ಅವರಿಗೆ ಇದೆ. ಈಗ ಅನ್ನಪೂರ್ಣಮ್ಮ ಅವರನ್ನೂ ಸೇರಿಸಿಕೊಂಡರೆ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ನಮ್ಮ ಸರ್ಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೂ ಶಕ್ತಿ, ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ. ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ನಮ್ಮ ಗ್ಯಾರಂಟಿಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ನಾವು ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರೋದು ಒಂದು ರೂಪಾಯಿಗೆ 15 ಪೈಸೆ ಮಾತ್ರ. 15ನೇ ಹಣಕಾಸು ಆಯೋಗ, ಭದ್ರಾ ಮೇಲ್ದಂಡೆ, ಬರ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಿದರು. ನಾವು ಸುಪ್ರೀಂಕೋರ್ಟ್ ಗೆ ಹೋಗಿ ಬರ ಪರಿಹಾರ ತಂದೆವು. ನಮ್ಮ ಪಾಲಿನ ತೆರಿಗೆ ಹಣ ಕೊಡುವುದನ್ನು ಕಡಿತ ಮಾಡಿದರೆ ಗ್ಯಾರಂಟಿಗಳನ್ನು ನಿಲ್ಲಿಸಿ ಬಿಡ್ತಾರೆ ಎಂಬ ದುಷ್ಟ ಆಲೋಚನೆಯಿಂದ ಕೇಂದ್ರ ಸರ್ಕಾರ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ ನಾವು 56 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಲೇ, 1.20 ಲಕ್ಷ ಕೋಟಿ ರೂ. ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಕೊಡುತ್ತಿದ್ದೇವೆ. ಆದ್ದರಿಂದ ಬಿಜೆಪಿಯವರ ಹಸಿ ಹಸಿ ಸುಳ್ಳುಗಳಿಗೆ ಮರುಳಾಗಬೇಡಿ. ಕಾಂಗ್ರೆಸ್ಸಿಗೆ ಮತ ನೀಡಿ. ನನ್ನ ಆತ್ಮೀಯ ಗೆಳೆಯನ ಮಗಳು ಅನ್ನಪೂರ್ಣಮ್ಮ ಅವರನ್ನು ನೀವು ಗೆಲ್ಲಿಸಲೇಬೇಕು. ಈ.ತುಕಾರಾಮ್ ಅವರಿಂದ ಖಾಲಿಯಾಗಿರುವ ಶಾಸಕ ಸ್ಥಾನವನ್ನು ಅನ್ನಪೂರ್ಣಮ್ಮ ಭರ್ತಿ ಮಾಡಬೇಕು ಎಂದರು.
ಅನ್ನಪೂರ್ಣಮ್ಮ ಅವರು ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ. ನಾನೇನು ತಪ್ಪು ಮಾಡದೆ ಇದ್ದರೂ ನನ್ನ ಮೇಲೆ ಸುಳ್ಳು ಕೇಸು ಹಾಕಿದ್ದಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಸಣ್ಣ ಕಳಂಕವೂ ನನ್ನ ಮೇಲಿಲ್ಲ. ಆದರೆ ಸುಳ್ಳು ಕೇಸು ಹಾಕಿಸಿದ್ದಾರೆ. ಈ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಅಂದರೆ ಇಲ್ಲಿ ಅನ್ನಪೂರ್ಣಮ್ಮ ಅವರನ್ನು ನೀವು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.