ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ವಂಚಿತ ಕೆ.ಎಸ್. ದಿವಾಕರ್ ಅಕ್ಟೋಬರ್ 23ರಂದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ಸಂಡೂರು ಉಪ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ನಿರಾಸೆಯಾಗಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್. ದಿವಾಕರ್, 2012ರಿಂದ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದೇನೆ. 2018, 2023 ಮತ್ತು ಈಗ ನನಗೆ ಬಿಜೆಪಿ ಟಿಕೆಟ್ ತಪ್ಪಿದೆ. ಪಕ್ಷ ಅನ್ಯಾಯ ಮಾಡಿದೆ ಎಂದು ದೂರಿದ್ದಾರೆ.
ಮೂರನೇ ಬಾರಿಗೆ ನನಗೆ ಬಿಜೆಪಿ ಟಿಕೆಟ್ ತಪ್ಪಿದೆ. ಕಳೆದ ಚುನಾವಣೆಯಲ್ಲಿ ಕೆ.ಆರ್.ಪಿ.ಪಿ. ಪಕ್ಷದಿಂದ ಸ್ಪರ್ಧಿಸಿ 32 ಸಾವಿರ ಮತ ಪಡೆದಿದ್ದೇನೆ. ಆದರೆ, ಪಕ್ಷದ ದೊಡ್ಡವರೇ ನನ್ನನ್ನು ತುಳಿದಿದ್ದಾರೆ. ಹೀಗಾಗಿ ಅಕ್ಟೋಬರ್ 23 ರಂದು ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕೆ.ಎಸ್. ದಿವಾಕರ್ ತಿಳಿಸಿದ್ದಾರೆ.
ದಿವಾಕರ್ ಅವರ ಮನವೊಲಿಕೆಗೆ ಬಿಜೆಪಿ ನಾಯಕರು ಕ್ರಮ ಕೈಗೊಂಡಿದ್ದರೂ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಅವರ ಪರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿರುಸಿನ ಪ್ರಚಾರ ನಡೆಸಿದ್ದಾರೆ.