ಕೊಲ್ಕತ್ತಾ: ಕೊಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರ ಮತ್ತಷ್ಟು ಕರಾಳ ಕೃತ್ಯಗಳು ಬಯಲಾಗಿವೆ.
ಸಿಬಿಐ ವಶದಲ್ಲಿರುವ ಸಂದೀಪ್ ಘೋಷ್ ಆಸ್ಪತ್ರೆಯಲ್ಲಿನ ಅನಾಥ ಶವಗಳನ್ನು ಮಾರಾಟ ಮಾಡುವುದು, ಮೆಡಿಕಲ್ ತ್ಯಾಜ್ಯವನ್ನು ಅಕ್ರಮವಾಗಿ ಸಾಗಿಸುವುದು, ವಿದ್ಯಾರ್ಥಿಗಳಿಂದ ಲಂಚ ಪಡೆಯುವುದು ಸೇರಿದಂತೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.
ಆರ್.ಜಿ. ಕರ್ ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕ ಅಖ್ತ ಅಲಿ ಈ ಬಗ್ಗೆ ಆರೋಪ ಮಾಡಿದ್ದು, ಕ್ರಮಕ್ಕೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಗಳ ಟೆಂಡರ್‌ನಲ್ಲಿ ಶೇಕಡ 20ರಷ್ಟು ಕಮಿಷನ್ ಪಡೆಯುತ್ತಿದ್ದ ಸಂದೀಪ್ ಘೋಷ್ ಭದ್ರತೆಗಾಗಿ ಖಾಸಗಿ ಬಾನ್ಸರ್ ಗಳನ್ನು ನೇಮಿಸಿಕೊಂಡಿದ್ದ ಎಂದು ಹೇಳಲಾಗಿದೆ.
ವಿಚಾರಣೆಗೆ ಸಂದೀಪ್ ಘೋಷ್ ಸಹಕರಿಸದ ಹಿನ್ನೆಲೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಅವರನ್ನು ಒಳಪಡಿಸಲು ನಿರ್ಧರಿಸಿರುವ ಸಿಬಿಐ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸಂದೀಪ್ ಘೋಷ್ ಅವರನ್ನು ಅನೇಕ ಬಾರಿ ವಿಚಾರಣೆಗೆ ಒಳಪಡಿಸಿದ್ದರೂ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಖಚಿತತೆಗಾಗಿ ಪಾಲಿಗ್ರಾಪ್ ಪರೀಕ್ಷೆಗೆ ಒಳಪಡಿಸಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ.