ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಕಿರುಕುಳ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ರಕ್ಷಣೆಗಾಗಿ ಕೇರಳದ ಹೇಮಾ ಮಾದರಿ ಸಮಿತಿ ರಚನೆಯಾಗಬೇಕು ಎಂಬ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಮಿತೆ ರಚನೆ ಮಾಡುವುದು ಉತ್ತಮ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚಿತ್ರರಂಗದ ಕಲಾವಿದೆಯರ ಜೊತೆ ಮಹಿಳಾ ಆಯೋಗ ಸಭೆ ನಡೆಸಿದೆ. ಖಂಡಿತಾ ಸಮಿತಿ ರಚನೆ ಆಗಬೇಕು. ನಾನು ಕೂಡ ಸಮಿತಿ ರಚನೆ ಆಗಲಿ ಅಂತ ಹೇಳುತ್ತೇನೆ. ಮುಖ್ಯಮಂತ್ರಿಗಳು ಈಗಾಗಲೇ ಮಾಹಿತಿ ಪಡೆದಿದ್ದಾರೆ ಎಂದರು.
ಚಿತ್ರರಂಗ ಅಷ್ಟೇ ಅಲ್ಲ, ಯಾವ ಕ್ಷೇತ್ರದಲ್ಲೂ ಮಹಿಳೆಯರಿಗೆ ದೌರ್ಜನ್ಯ ಆಗಬಾರದು. ಈ ಬಗ್ಗೆ ನನ್ನ ಬಳಿ ಯಾವ ನಟಿಯರೂ ಬಂದು ಮಾತನಾಡಿಲ್ಲ. ಆದರೆ ಮಹಿಳೆಯರ ರಕ್ಷಣೆಗಾಗಿ ಸಮಿತಿ ರಚನೆಯಾಗಲಿ ಎಂದು ಸಚಿವರು ಹೇಳಿದರು.