ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿಯೂ ಮಹಿಳೆಯರ ರಕ್ಷಣೆಗಾಗಿ ಮಲಯಾಳಂ ಚಿತ್ರರಂಗದಂತೆ ಹೇಮಾ ಕಮಿಟಿ ಮಾದರಿಯಲ್ಲಿ ಸಮಿತಿ ರಚನೆಯಾಗಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದು, ಈ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ನೇತೃತ್ವದಲ್ಲಿ ನಡೆದ ಕಲಾವಿದರು ಹಾಗೂ ಫಿಲ್ಮ್ ಚೇಂಬರ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಚಿತ್ರರಂಗದಲ್ಲಿ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ, ಸಮಸ್ಯೆಗಳ ಬಗ್ಗೆ ಸ್ಪಂದಿಸಲು ಒಂದು ಸಮಿತಿ ರಚನೆಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಮಹಿಳಾ ಕಲಾವಿದರು, ನಿರ್ದೇಶಕರು ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ, ಚಿತ್ರರಂಗಕ್ಕೆ ಹೆಣ್ಣುಮಕ್ಕಳು ಬರುತ್ತಾರೆ ಎಂದರೆ ತಂದೆ-ತಾಯಿ ಸುಲಭವಾಗಿ ಕಳುಹಿಸಲು ಒಪ್ಪಲ್ಲ. ಇಂತಹ ಸ್ಥಿತಿ ಬದಲಾಗಬೇಕು. ಆ ನಿಟ್ಟಿನಲ್ಲಿ ಒಂದು ಸಮಿತಿ ರಚನೆಯಾದರೆ ಮಹಿಳೆಯರ ರಕ್ಷಣೆ ಬಗ್ಗೆ ಧೈರ್ಯ ಬರುತ್ತದೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಸುರಕ್ಷಿತರಾಗಿ ಇರುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಇಂತಹ ಪ್ರಶ್ನೆ ಬರುವ ವಾತಾವರಣ ನಿವಾರಿಸಲು ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತದೆ ಎಂದರು.
ಈ ಬಗ್ಗೆ ವಾಣಿಜ್ಯ ಚಿತ್ರರಂಗಕ್ಕೆ ಪತ್ರ ಬರೆಯಲಾಗಿದೆ. ಇಂದಿನ ಸಭೆಯಲ್ಲಿ ಕೆಲವೇ ಕೆಲವು ನಟಿಯರು ಮಾತ್ರ ಆಗಮಿಸಿದ್ದರು. ಹೊರ ದೇಶದಲ್ಲಿ ಕಾರ್ಯಕ್ರಮವಿದ್ದುದರಿಂದ ಅಲ್ಲಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ನನಗೆ ಅನಾರೋಗ್ಯವಿದ್ದರೂ ನಾನು ಸಭೆ ನಡೆಸಿದ್ದೇನೆ. ಇನ್ನೊಂದು ಸಭೆ ನಡೆಸಲಾಗುವುದು. ಆ ಸಭೆಗೆ ಎಲ್ಲರೂ ಹಾಜರಾಗಬೇಕು. ಕಮಿಟಿ ಹೇಗಿರಬೇಕು ಎಂಬ ಬಗ್ಗೆ ಕಾನೂನು ಇದೆ. ಅದೇ ರೀತಿ ಸಮಿತಿ ರಚನೆಯಾಗಲಿದೆ. ಸರ್ಕಾರದ ಗೆಜೆಟ್ ನಲ್ಲಿ ಈ ಸಮಿತಿ ಇರಲಿದ್ದು, ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.