ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಕಿರಣ್ ಗೋವಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಅವರು ಕಚೇರಿಯಲ್ಲಿ ಇದ್ದ ವೇಳೆಯಲ್ಲಿ ಹೃದಯಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪತ್ನಿ, ಇಬ್ಬರು ಮಕ್ಕಳನ್ನು ಕಿರಣ್ ಗೋವಿ ಅಗಲಿದ್ದಾರೆ. ‘ಪಯಣ’, ‘ಸಂಚಾರಿ’, ‘ಯಾರಿಗೆ ಯಾರುಂಟು’ ಮೊದಲಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ರವಿಶಂಕರ್ ನಾಯಕ ನಟರಾಗಿ ನಟಿಸಿದ್ದ ‘ಪಯಣ’ ಸೂಪರ್ ಹಿಟ್ ಆಗಿತ್ತು.
ಶ್ರೀನಗರ ಕಿಟ್ಟಿ ಅಭಿನಯದ ‘ಪಾರು ವೈಫ್ ಆಫ್ ದೇವದಾಸ’ ಕೂಡ ಯಶಸ್ವಿಯಾಗಿತ್ತು. 43 ವರ್ಷದ ಕಿರಣ್ ಗೋವಿ ದಿಢೀರ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಕಂಬನಿ ಮಿಡಿದಿದೆ.