ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದ ಬಳಿ ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ಅಧಿಕಾರಿಗಳ ಮೇಲೆ ದಂಧೆಕೋರರು ಹಲ್ಲೆ ಮಾಡಿದ್ದಾರೆ.
ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಖನಿಜ ರಕ್ಷಣಾ ಪಡೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಐವರು ಸಿಬ್ಬಂದಿಯ ತಂಡ ಯಡಿವಾಳ ಗ್ರಾಮದ ಬಳಿ ಅಕ್ರಮ ಮರಳು ಸಾಗಣೆ ತಡೆಯಲು ಹೋಗಿದ್ದ ವೇಳೆ ಘಟನೆ ನಡೆದಿದೆ.
ಜೆಸಿಬಿ ಮೂಲಕ ಮರಳನ್ನು ಟಿಪ್ಪರ್ ಗೆ ತುಂಬಿ ಸಾಗಿಸುವ ವೇಳೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ವಶಕ್ಕೆ ಪಡೆದ ವಾಹನಗಳನ್ನು ಪೊಲೀಸ್ ಠಾಣೆಗೆ ತರುವಾಗ ಐದಾರು ಜನರ ಗುಂಪು ಖನಿಜ ರಕ್ಷಣಾ ಪಡೆಯ ಸಿಬ್ಬಂದಿ ಬಾಲಪ್ಪ ಅವರ ಮೇಲೆ ಹಲ್ಲೆ ಮಾಡಿದೆ. ಗಾಯಗೊಂಡ ಬಾಲಪ್ಪರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂಡದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮಂಜುನಾಥ, ಚಾಲಕ ವೀರೇಶ, ಖನಿಜ ರಕ್ಷಣಾ ಪಡೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಸೋಮಶೇಖರ್, ಪಿಐ ಮಹದೇವಪ್ಪ ಇದ್ದರು. ಮಾನ್ವಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.