
ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಕಣ್ಣುಗಳು ಇಬ್ಬರ ಬಾಳಿಗೆ ಬೆಳಕಾಗಿವೆ.
ಇಬ್ಬರು ಯುವಕರ ಬಾಳಿಗೆ ವಿಜಯ್ ಕಣ್ಣುಗಳು ಬೆಳಕಾಗಿರುವ ಬಗ್ಗೆ ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತಾ ರಾಥೋಡ್ ಮಾಹಿತಿ ನೀಡಿ, ಯುವಕರಿಗೆ ಕಣ್ಣು ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ವಿಜಯ್ ಕುಟುಂಬಕ್ಕೆ ಆಸ್ಪತ್ರೆಯ ನಿರ್ದೇಶಕಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಗತ್ಯವಿರುವ ಇಬ್ಬರು ರೋಗಿಗಳಿಗೆ ಕಣ್ಣು ಹಾಕಲಾಗಿದೆ. ಬ್ರೈನ್ ಡೆಡ್ ಆದಾಗ ಕಣ್ಣು ಉತ್ತಮ ಗುಣಮಟ್ಟದಲ್ಲಿ ಇರುತ್ತವೆ. ನಟ ಸಂಚಾರಿ ವಿಜಯ್ ಕಣ್ಣುಗಳು ಉತ್ತಮವಾಗಿದ್ದವು. ವಿಜಯ್ ಕಣ್ಣಿನಿಂದ ಇಬ್ಬರೂ ಜಗತ್ತು ನೋಡುವಂತಾಗಿದೆ. ಆಪರೇಷನ್ ಮುಗಿದಿದ್ದು ಆರರಿಂದ ಎಂಟು ಗಂಟೆಯ ಬಳಿಕ ದೃಷ್ಟಿ ಬರಲಿದೆ. 24 ಗಂಟೆಯೊಳಗೆ ದೃಷ್ಟಿಯ ಪ್ರಮಾಣದ ಬಗ್ಗೆ ಗೊತ್ತಾಗಲಿದೆ ಎಂದು ಹೇಳಲಾಗಿದೆ.