ಸ್ಯಾನ್ ಫ್ರಾನ್ಸಿಸ್ಕೋ: ತುರ್ತು ಸನ್ನಿವೇಶಗಳಲ್ಲಿ ರಿಮೋಟ್-ನಿಯಂತ್ರಿತ ರೋಬೋಟ್‌ಗಳನ್ನು ಬಳಸಿಕೊಂಡು ಕೊಲ್ಲುವ ಅವಕಾಶವನ್ನು ಪೊಲೀಸರಿಗೆ ನೀಡುವಂಥ ಒಂದು ಅನುಮೋದನೆಯನ್ನು ಸ್ಯಾನ್ಫ್ರಾನ್ಸಿಸ್ಕೋದ ಮೇಲ್ವಿಚಾರಕರ ಮಂಡಳಿ ನೀಡಿದೆ.
ಅಮೆರಿಕದ ಪಶ್ಚಿಮ ಕರಾವಳಿಯ ನಗರದಲ್ಲಿನ ಕೆಲವೊಂದು ನಾಗರಿಕ ಸ್ವಾತಂತ್ರ್ಯಗಳ ಗುಂಪು ಮತ್ತು ಇತರ ಪೊಲೀಸ್ ಮೇಲ್ವಿಚಾರಣಾ ಗುಂಪುಗಳ ವಿರೋಧದ ಹೊರತಾಗಿಯೂ ಇಂಥದ್ದೊಂದು ಪದ್ಧತಿಗೆ ಅನುಮೋದನೆ ದೊರೆತಿದೆ. ಎರಡು ಗಂಟೆಗಳ ವಿವಾದಾತ್ಮಕ ಚರ್ಚೆಯ ನಂತರ 8-3 ಮತಗಳಿಂದ ಇದಕ್ಕೆ ಅನುಮೋದನೆ ದೊರೆತಿದೆ.
ಪ್ರಸ್ತುತ ನೀತಿಯಲ್ಲಿ ಅಧಿಕಾರಿಗಳು ತೃಪ್ತರಾಗಿದ್ದರೂ, ಔಪಚಾರಿಕ ದೃಢೀಕರಣಕ್ಕಾಗಿ ಮೇಯರ್‌ಗೆ ಸಲ್ಲಿಸುವ ಮೊದಲು ಎರಡನೇ ಸುತ್ತಿನಲ್ಲಿ ಅನುಮೋದನೆಯನ್ನು ಪಡೆಯಬೇಕು. ರೋಬೋಟ್‌ಗಳನ್ನು ಮಾರಣಾಂತಿಕ ಶಕ್ತಿಯ ರೂಪದಲ್ಲಿ ಬಳಸಲು ಆದೇಶಿಸುವ ಅಧಿಕಾರವನ್ನು ಕಡಿಮೆ ಸಂಖ್ಯೆಯ ಹಿರಿಯ ಅಧಿಕಾರಿಗಳು ಮಾತ್ರ ಹೊಂದಿದ್ದಾರೆ. ಮೂವರು ಉನ್ನತ ಪೊಲೀಸ್ ನಾಯಕರಲ್ಲಿ ಒಬ್ಬರು ರೋಬೋಟ್‌ಗಳ ಬಳಕೆಯನ್ನು ಅನುಮೋದಿಸಬೇಕಾಗುತ್ತದೆ ಮತ್ತು ತಂತ್ರವನ್ನು ವಿಪರೀತ ಸನ್ನಿವೇಶಗಳಲ್ಲಿ ಮಾತ್ರ ಬಳಸಲಾಗುತ್ತದೆ.
ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸ್ ಇಲಾಖೆ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾದ ರೋಬೋಟ್‌ಗಳನ್ನು ಹೊಂದಿಲ್ಲ ಅಥವಾ ಹಾಗೆ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದೆ. ಆದರೆ ಇದರ ನಡುವೆ ಇಂಥದ್ದೊಂದು ಅನುಮೋದನೆ ದೊರೆತಿರುವುದು ಭಾರಿ ವಾದ-ವಿವಾದಕ್ಕೆ ಕಾರಣವಾಗಿದೆ.