ಕೋವಿಡ್-19 ಸಾಂಕ್ರಾಮಿಕದ ನಿರ್ಬಂಧಗಳಿಂದಾಗಿ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮತ್ತು ವಿಮಾನ ನಿಲ್ದಾಣಗಳು ಒದಗಿಸುವ ಸೌಲಭ್ಯಗಳ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಇದೀಗ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಸೌಲಭ್ಯಗಳನ್ನು ಪುನಃ ಒದಗಿಸಲಾಗುತ್ತಿದೆ.
ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣವು ಎರಡು ವರ್ಷಗಳ ವಿರಾಮದ ನಂತರ ತನ್ನ ಯೋಗ ಕೊಠಡಿಗಳನ್ನು ಪುನಃ ತೆರೆದಿದೆ.
ಈ ವಿಮಾನ ನಿಲ್ದಾಣವು 2012ರಲ್ಲಿ ವಿಮಾನ ನಿಲ್ದಾಣದ ಉಚಿತ ಸೌಲಭ್ಯ ವರ್ಗದಲ್ಲಿ ಎರಡು ಯೋಗ ಕೊಠಡಿಗಳ ಸೇವೆ ಆರಂಭಿಸಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ ಈ ಕೊಠಡಿಯನ್ನು ಮುಚ್ಚಲಾಗಿತ್ತು. ಏಪ್ರಿಲ್ 4 ರಂದು ಪ್ರಯಾಣಿಕರಿಗೆ ಸೌಲಭ್ಯ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಯೋಗ ಮ್ಯಾಟ್‌ಗಳನ್ನು ಹೊಂದಿದ ಯೋಗ ಕೊಠಡಿಯ ಸೌಲಭ್ಯವನ್ನು ಎರಡು ಕೊಠಡಿಗಳಾಗಿ ವಿಂಗಡಿಸಲಾಗಿದೆ. ಈ ಸೌಲಭ್ಯಗಳು ಟರ್ಮಿನಲ್ 2 ಮತ್ತು ಟರ್ಮಿನಲ್ 3 ರಲ್ಲಿ ವಿಮಾನ ನಿಲ್ದಾಣದ ಭದ್ರತಾ ನಂತರದ ಸ್ಥಳಗಳಲ್ಲಿ ಇವೆ.
ವಿಮಾನ ನಿಲ್ದಾಣದ ಟ್ವೀಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಗೆ ಬಂದಾಗ ಈ ಸೌಲಭ್ಯ ಬಳಸಿ ಎಂದು ಕೋರಿದೆ.