ಬೆಂಗಳೂರು: ಕೋವಿಡ್-19 ರ ಸೋಂಕಿನಿಂದಾಗಿ 2021-22 ನೇ ಸಾಲಿನ ಭೌತಿಕ ತರಗತಿಗಳು ಆರಂಭ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಜು. 5 ರಿಂದ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಶಿಕ್ಷಕರು ಸದರಿ ವೇಳಾಪಟ್ಟಿಯನ್ನು ತಮ್ಮಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಲುಪಿಸಿ ಅವರೊಂದಿಗೆ ಸಮನ್ವಯ ಸಾಧಿಸಿ ನಿಗದಿತ ಸಮಯದಲ್ಲಿ ನಿಗದಿತ ತರಗತಿಯ ವಿದ್ಯಾರ್ಥಿಗಳು ಸಂವೇದಾ ತರಗತಿಗಳನ್ನು ವೀಕ್ಷಿಸುವಂತೆ ಕ್ರಮ ಕೈಗೊಂಡು ನಂತರ ಪ್ರತಿಯೊಬ್ಬ ವಿದ್ಯಾರ್ಥಿಯ ಮೌಲ್ಯಮಾಪನ ವಿವರಗಳನ್ನು ನಿರ್ವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.
ಯಾವುದೇ ವಿದ್ಯಾರ್ಥಿಗೆ ದೂರದರ್ಶನ ವೀಕ್ಷಿಸಲು ಅವಕಾಶದ ಕೊರತೆಯಿದ್ದಲ್ಲಿ ಆಯಾ ಶಾಲೆಯ ಶಿಕ್ಷಕರು ಎಸ್ಡಿಎಂಸಿ ಸದಸ್ಯರ ನೆರವು ಪಡೆದು ವಿದ್ಯಾರ್ಥಿಗೆ ದೂರದರ್ಶನ ವೀಕ್ಷಿಸಲು ಅನುಕೂಲ ಮಾಡುವುದು ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯಾಥಿಗಳ ಕಲಿಕೆಯನ್ನು ಪರಿಣಾಮಕಾರಿಗೊಳಿಸಬೇಕೆಂದು ಕಲ್ಪಿಸಬೇಕೆಂದು ಅವರು ತಿಳಿಸಿದ್ದಾರೆ.
1 ರಿಂದ 7 ನೇ ತರಗತಿಗಳಿಗೆ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತ್ತು 8 ರಿಂದ 10 ನೇ ತರಗತಿವರೆಗೆ ಬೆಳಗ್ಗೆ 8 ರಿಂದ ಸಂಜೆ 4.30 ರವರೆಗೆ ನಡೆಯಲಿವೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಮಕ್ಕಳು ಸಂವೇದಾ ತರಗತಿಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಚಿವರು ಕೋರಿದ್ದಾರೆ.