ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC), ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA), ಸಿಬಿಎಸ್ಇ, ಯುಪಿಎಸ್‌ಸಿ ಮೊದಲಾದ ಸಂಸ್ಥೆಗಳಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ಹಾಗೂ ವೃತ್ತಿಪರ ಸ್ಪರ್ಧಾತ್ಮಕ ಪರೀಕ್ಷೆಗಳು ಒಂದೇ ದಿನಾಂಕಗಳಂದು ನಿಗದಿಯಾಗಿರುವುದರಿಂದ ಅಭ್ಯರ್ಥಿಗಳಿಗೆ ಗೊಂದಲ ಉಂಟಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ 100 ಭೂಮಾಪಕರ ಹುದ್ದೆಗಳ ನೇಮಕಾತಿಗೆ ಜುಲೈ 7ರಂದು ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಅದೇ ದಿನ ಸಿಬಿಎಸ್ಇಯಿಂದ ಸಿಟಿಇಟಿ ಪರೀಕ್ಷೆ, ಯುಪಿಎಸ್ಸಿ ಯಿಂದ ಇಪಿಎಫ್ಒ ಸಂಘಟನೆಯಲ್ಲಿ ಖಾಲಿ ಇರುವ 322 ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಲೋಕಸೇವಾ ಆಯೋಗದಿಂದ ಆಗಸ್ಟ್ 11ರಂದು ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಮತ್ತು ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್ ಮತ್ತು ಪ್ರಥಮ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಹೀಗೆ ಒಂದೇ ದಿನ ಪರೀಕ್ಷೆಗಳು ಇರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ ಮೂಡಿದೆ.