ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಜ಼ೊಮ್ಯಾಟೋ ಡೆಲಿವರಿ ಎಕ್ಸಿಕ್ಯೂಟಿವ್ ಸಲೀಲ್ ತ್ರಿಪಾಠಿ ಕುಟುಂಬಕ್ಕೆ ಟ್ವಿಟರ್ ಮೂಲಕ ನೆರವಿನ ಮಹಾಪೂರವೇ ಹರಿದು ಬಂದಿದೆ.
ದೆಹಲಿ ಪೊಲೀಸ್ ಪೇದೆಯೊಬ್ಬ ಚಲಿಸುತ್ತಿದ್ದ ಎಸ್‌ಯುವಿಯೊಂದು ಗುದ್ದಿದ ಪರಿಣಾಮ 36-ವರ್ಷ ವಯಸ್ಸಿನ ತ್ರಿಪಾಠಿ ಮೃತಪಟ್ಟಿದ್ದಾರೆ. ಆ ವೇಳೆ ತ್ರಿಪಾಠಿ ತಮ್ಮ ಕರ್ತವ್ಯದಲ್ಲಿದ್ದು, ಫುಡ್ ಡೆಲಿವರಿಯಲ್ಲಿ ಭಾಗಿಯಾಗಿದ್ದರು.
ಹೊಟೇಲೊಂದರಲ್ಲಿ ಮ್ಯಾನೇಜರ್ ಆಗಿದ್ದ ಸಲೀಲ್ ಕೋವಿಡ್ ಕಾರಣದಿಂದಾಗಿ ತಮ್ಮ ಕೆಲಸ ಕಳೆದುಕೊಂಡ ಬಳಿಕ ತಮ್ಮ ಜೀವನಕ್ಕಾಗಿ ಫುಡ್ ಡೆಲಿವರಿಯನ್ನೇ ನಂಬಿಕೊಂಡಿದ್ದರು. ದೆಹಲಿಯ ರೋಹಿಣಿ ಪ್ರದೇಶದಲ್ಲಿ ಸಲೀಲ್ ತಮ್ಮ ಮಡದಿ ಹಾಗೂ 10 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದರು.
ಘಟನೆ ಬೆಳಕಿಗೆ ಬರುತ್ತಲೇ ಸಲೀಲ್ ಕುಟುಂಬಕ್ಕೆ ನೆರವಾಗಲು ದೊಡ್ಡ ಸಂಖ್ಯೆಯಲ್ಲಿ ನೆಟ್ಟಿಗರು ಮುಂದಾಗಿದ್ದಾರೆ. ಸಿನಿಮಾ ನಿರ್ಮಾಪಕ ಮನೀಷ್ ಮುಂದ್ರಾ ಸಲೀಲ್‌ರ ಮಡದಿ ಸುಚಿತ್ರಾ ತ್ರಿಪಾಠಿ ಬ್ಯಾಂಕ್ ಖಾತೆಗೆ ನಾಲ್ಕು ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಮನೀಷ್ ಮುಂದ್ರಾರ ಈ ಹೃದಯಸ್ಪರ್ಶಿ ನಡೆಯು ಇನ್ನಷ್ಟು ನೆಟ್ಟಿಗರಿಗೆ ಸ್ಪೂರ್ತಿ ಕೊಟ್ಟಿದ್ದು, ಸುಚಿತ್ರಾ ನೆರವಿಗೆ ಆಗಮಿಸಿದ್ದಾರೆ.
ಇದನ್ನು ಕಂಡ ರೋಹಿತ್ ಹೆಸರಿನ ಮತ್ತೊಬ್ಬ ನೆಟ್ಟಿಗರು, “2020ರಿಂದ ನಾವೆಲ್ಲಾ ಮಾನವೀಯತೆ ಮೇಲೆ ನಡೆಯುತ್ತಿದ್ದೇವೆ,” ಎಂದು ಪೋಸ್ಟ್ ಮಾಡಿದ್ದು, ತಾವೂ ಸಹ ಒಂದು ಮೊತ್ತವನ್ನು ನೀಡಿರುವುದಾಗಿ ತಿಳಿಸಿದ್ದಾರೆ.