
ತಮ್ಮ ಬಹುನಿರೀಕ್ಷಿತ ಚಿತ್ರ ʼಪುಷ್ಪ: ದಿ ರೈಸ್ʼನಲ್ಲಿ ಸಮಂತಾ ರುತ್ ಪ್ರಭು ಅವರ ವಿಶೇಷ ನೃತ್ಯ ಇರಲಿದೆ ಎಂದು ಪುಷ್ಪಾ ಸಿನಿಮಾ ನಿರ್ಮಾಪಕರು ಸೋಮವಾರ ಹೇಳಿದ್ದಾರೆ. ವಿಶೇಷ ಹಾಡೊಂದಕ್ಕೆ ಸಮಂತಾ ಅವರು ಹೆಜ್ಜೆ ಹಾಕಲಿದ್ದಾರಂತೆ.
ಚಿತ್ರದ ನಿರ್ಮಾಣ ಬ್ಯಾನರ್ ಮೈತ್ರಿ ಮೂವಿ ಮೇಕರ್ಸ್, ಸಮಂತಾ ಅವರನ್ನು ಒಳಗೊಂಡ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ನಟಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಪುಷ್ಪಾ ಸಿನಿಮಾದಲ್ಲಿ ಐದನೇ ಹಾಡು ಬಹಳ ವಿಶೇಷವಾಗಿರಲಿದೆ. ಈ ಹಾಡಿಗೆ ಡ್ಯಾನ್ಸ್ ಮಾಡಲು ವಿಶೇಷ ವ್ಯಕ್ತಿ ಬೇಕಿತ್ತು. ಅದಕ್ಕಾಗಿ ಸಮಂತಾ ಅವರನ್ನು ಸಂಪರ್ಕಿಸಲಾಗಿತ್ತು, ಅವರೂ ಕೂಡ ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಮುಂಬರುವ ಕ್ರೈಮ್ ಥ್ರಿಲ್ಲರ್ ಪುಷ್ಪಾ ಚಿತ್ರದಲ್ಲಿನ ವಿಶೇಷ ಹಾಡಿಗೆ ಸಮಂತಾ ಅವರ ಸಂಭಾವನೆ ಬಗ್ಗೆ ಹಲವು ಊಹಾಪೋಹಗಳಿವೆ. ನಟಿ ಈ ಹಾಡಿಗೆ ನೃತ್ಯ ಮಾಡಲು 1.5 ಕೋಟಿ ರೂ.ನಷ್ಟು ಬೇಡಿಕೆ ಇಟ್ಟಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.
ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಪುಷ್ಪಾ ಚಿತ್ರದಲ್ಲಿ ಮಲಯಾಳಂನ ಜನಪ್ರಿಯ ನಟ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸುನೀಲ್, ನಟಿ ಅನಸೂಯಾ ಭಾರದ್ವಾಜ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುತಾರಾಗಣದ ಬಹುಭಾಷಾ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.