ಉತ್ತರಪ್ರದೇಶ ಸದ್ಯಕ್ಕೆ ಚುನಾವಣಾ ರಣಕಣ. ಅದರಲ್ಲೂ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಈ ಬಾರಿ ನೇರನೇರ ಹಣಾಹಣಿ ಏರ್ಪಟ್ಟಿದೆ. ಬ್ರಾಹ್ಮಣ ಸಮುದಾಯ ಮತ್ತು ಹಿಂದುಳಿದ ವರ್ಗಗಳು ಮತದಾನದಲ್ಲಿ ಪ್ರಮುಖ ಪಾತ್ರವಹಿಸಲಿವೆ. ಅದಕ್ಕಾಗಿ ಅವರ ಓಲೈಕೆ, ಅವರ ಆರಾಧ್ಯ ದೇವತೆಯ ಮಂದಿರಗಳ ಭೇಟಿಯಲ್ಲಿ ರಾಜಕೀಯ ಮುಖಂಡರು ಮುಳುಗಿದ್ದಾರೆ.
ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ತಿಂಗಳ ಮುನ್ನ ಸಾರ್ವಜನಿಕ ಭಾಷಣವೊಂದರಲ್ಲಿ ಸಮಾಜವಾದಿ ಪಕ್ಷದವರು ತೊಡುವ ಕೆಂಪು ಟೋಪಿಯನ್ನು ’’ಲಾಲ್ ಟೋಪಿ’’ ಎಂದು ಸಂಬೋಧಿಸಿದ್ದರು. ಜತೆಗೆ ಅದು ಅಪಾಯ ಅಥವಾ ತುರ್ತು ಪರಿಸ್ಥಿತಿಯ ಸಂಕೇತ, ಎಚ್ಚರವಾಗಿರಿ ಎಂದು ಜನರನ್ನು ಎಚ್ಚರಿಸಿದ್ದರು. ಲಾಲ್ ಟೋಪಿ ತೊಟ್ಟವರು ಅಧಿಕಾರಕ್ಕೆ ಬಂದರೆ ಕಷ್ಟ ಎಂದು ಪರೋಕ್ಷವಾಗಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಲು ಮನವಿ ಮಾಡಿದ್ದರು.
ಅದೇ ಲಾಲ್ ಟೋಪಿ ವ್ಯಾಖ್ಯಾನಕ್ಕೆ ತಿರುಗೇಟು ಕೊಡಲು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು, ಎಲ್ಲ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಚುನಾವಣೆ ಮುಗಿಯುವವರೆಗೆ ಸಾರ್ವಜನಿಕವಾಗಿ ಕೆಂಪು ಟೋಪಿ ಧರಿಸಿಕೊಂಡೇ ತಿರುಗಾಡಲು ಸೂಚಿಸಿದ್ದರು. ಅದರಂತೆ ಸಮಾಜವಾದಿ ಪಕ್ಷದ ರ್ಯಾಲಿಗಳಲ್ಲಿ ಕೆಂಪು ಟೋಪಿಗಳದ್ದೇ ದರ್ಬಾರು.
ಈ ಟೋಪಿಗೆ ಮತ್ತೊಮ್ಮೆ ಕುಟುಕಿರುವುದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು. ಕಳೆದ ಬಾರಿ ಸಮಾಜವಾದಿ ಪಕ್ಷವು ಆಡಳಿತದಲ್ಲಿದ್ದಾಗ ಮುಜಾಫ್ಫರ್ನಗರ ದಂಗೆ ಉಂಟಾಗಿತ್ತು. ಆ ವೇಳೆಯಲ್ಲಿ 60 ಹಿಂದೂಗಳ ಹತ್ಯೆಯಾಗಿತ್ತು. 1500 ಹಿಂದೂಗಳನ್ನು ಜೈಲಿಗೆ ಅಟ್ಟಲಾಗಿತ್ತು. ರಾಮ ಭಕ್ತರ ರಕ್ತದಿಂದ ಕೆಂಪು ಬಣ್ಣ ಬಳಿದುಕೊಂಡಿರುವ ಟೋಪಿಯು ಸಮಾಜವಾದಿ ಪಕ್ಷದ್ದು ಎಂದು ಖಾರವಾಗಿ ಆರೋಪಿಸಿದ್ದಾರೆ.
ಬಾಗಪತ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹಾಲಿ ಸಿಎಂ ಹಾಗೂ ಬಿಜೆಪಿಯ ಸಿಎಂ ಅಭ್ಯರ್ಥಿ, ಹಿಂದೂಗಳ ಐಕಾನ್ ಎಂದೇ ಕರೆಯಲಾಗುವ ಯೋಗಿ ಆದಿತ್ಯನಾಥ್ ಅವರು ಗಂಭೀರ ಆರೋಪ ಮಾಡಿದ್ದಾರೆ.