ನವದೆಹಲಿ: ಸ್ಯಾಮ್ ಪಿತ್ರೋಡಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂಗೀಕರಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಘೋಷಿಸಿದ್ದಾರೆ.
ಅವರ ಸ್ವಂತ ಇಚ್ಛೆಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ನಡುವೆ ದೇಶದ ವಿವಿಧ ಭಾಗಗಳ ಭಾರತೀಯರು ಹೇಗೆ ಕಾಣುತ್ತಾರೆ ಎಂಬ ಅವರ ಜನಾಂಗೀಯ ಕಾಮೆಂಟ್ ದೊಡ್ಡ ರಾಜಕೀಯ ವಿವಾದ ಸೃಷ್ಟಿಸಿದ ನಂತರ ರಾಜೀನಾಮೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪಿತ್ರೊಡಾ ಹೇಳಿಕೆಯನ್ನು ಖಂಡಿಸಿದ್ದರು.
ಈಗ ಅಮೆರಿಕದಲ್ಲಿ ನೆಲೆಸಿರುವ ಸ್ಯಾಮ್ ಪಿತ್ರೋಡಾ ಅವರು ರಾಜೀವ್ ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಅವರ ಸಲಹೆಗಾರರಾಗಿದ್ದರು. 2004 ರ ಚುನಾವಣೆಯಲ್ಲಿ UPA ಗೆಲುವಿನ ನಂತರ, ಸ್ಯಾಮ್ ಪಿತ್ರೋಡಾ ಅವರನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದ ರಾಷ್ಟ್ರೀಯ ಜ್ಞಾನ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. 2009 ರಲ್ಲಿ ಅವರು ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ಕುರಿತು ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾಗಿದ್ದರು.