ಉಪ್ಪಿಗಿಂತ ರುಚಿ ಬೇರೆ ಇಲ್ಲ. ಉಪ್ಪಿಲ್ಲದ ಅಡುಗೆ ಇಲ್ಲ. ಅಡುಗೆ ಮನೆಯಲ್ಲಿ ಉಪ್ಪು ಇದ್ದೇ ಇರುತ್ತೆ. ಉಪ್ಪನ್ನು ಅಡುಗೆಗೆ ಬಳಸ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸೌಂದರ್ಯಕ್ಕೂ ಉಪ್ಪು ಉಪಯುಕ್ತ ಎನ್ನುವುದು ಅನೇಕರಿಗೆ ಮಾತ್ರ ತಿಳಿದಿದೆ.
ಉಪ್ಪು ಸೌಂದರ್ಯವರ್ಧಕ. ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವಂತ ಉಪ್ಪಿನಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ, ಅದರಲ್ಲಿ ಪಾದಗಳನ್ನಿಟ್ಟು ಕುಳಿತುಕೊಂಡರೆ ವಿಶ್ರಾಂತಿ ಸಿಗುವುದಲ್ಲದೇ, ಪಾದಗಳ ಉರಿಯನ್ನು ತಪ್ಪಿಸಬಹುದು. ಇದರ ಜೊತೆಗೆ ಉಪ್ಪು ಮುಖದ ಸೌಂದರ್ಯಕ್ಕೂ ಒಳ್ಳೆಯದು.
ಎಣ್ಣೆಯುಕ್ತ ಚರ್ಮಕ್ಕೆ ಉಪ್ಪು ಬಹಳ ಉತ್ತಮ. ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಉಪ್ಪನ್ನು ಹಾಕಿ, ಮುಖದ ಮೇಲೆ ಚಿಮುಕಿಸಿ. ನಂತರ ಹತ್ತಿಯಿಂದ ಒರೆಸಿಕೊಂಡು, ಮುಖವನ್ನು ತೊಳೆದುಕೊಳ್ಳಿ.
ಬೆಚ್ಚಗಿನ ನೀರಿಗೆ ಉಪ್ಪು ಹಾಕಿ, ಅದರ ಆವಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದಲೂ ಎಣ್ಣೆಯುಕ್ತ ಚರ್ಮದವರು ಕಾಂತಿಯುತ ತ್ವಜೆ ಪಡೆಯಬಹುದು.
ಕಣ್ಣಿನ ಉರಿಯೂತ ತಡೆಯಲು ಇದು ಸಹಕಾರಿ. ಆಯಾಸದ ಕಾರಣ ಹಾಗೂ ಸರಿಯಾಗಿ ನಿದ್ದೆ ಬರದಿದ್ದಲ್ಲಿ ಕಣ್ಣು ಊದಿಕೊಳ್ಳುತ್ತದೆ. ಉಪ್ಪನ್ನು ಬೆರೆಸಿರುವ ಬೆಚ್ಚಗಿನ ನೀರಿನಿಂದ ಉಬ್ಬಿದ ಜಾಗಕ್ಕೆ ಮಸಾಜ್ ಮಾಡಿದರೆ, ಊತ ಕಡಿಮೆಯಾಗುತ್ತದೆ.
ಉಪ್ಪೊಂದು ಉತ್ತಮ ಸ್ಕ್ರಬ್ಬರ್ ಆಗಿದೆ. ಕೈನಲ್ಲಿ ಸ್ವಲ್ಪ ಉಪ್ಪು ತೆಗೆದುಕೊಳ್ಳಿ. ಅದಕ್ಕೆ ನೀರು ಸೇರಿಸಿ. ಇದನ್ನು ಮುಖದ ಮೇಲೆ ಹಾಕಿಕೊಂಡು ಬರಿಗೈನಿಂದ ಮಸಾಜ್ ಮಾಡಿ. ಇದರಿಂದ ಡೆಡ್ ಸ್ಕಿನ್ ಹೋಗುವುದಲ್ಲದೆ, ಚರ್ಮ ಮೃದುವಾಗಿ, ಹೊಳೆಯುತ್ತದೆ.
ಹಲ್ಲಿಗೆ ಕೂಡ ಇದು ಉಪಯೋಗಕಾರಿ. ಸ್ವಲ್ಪ ಉಪ್ಪು ಹಾಗೂ ಅಡುಗೆ ಸೋಡಾವನ್ನು ಬಳಸಿ ಹಲ್ಲುಜ್ಜಿದರೆ, ಹಲ್ಲುಗಳು ಹೊಳೆಯುತ್ತವೆ.
ಸಾಮಾನ್ಯ ಉಪ್ಪನ್ನು ಬಳಸುವ ಬದಲು ಸಮುದ್ರದ ಉಪ್ಪನ್ನು ಬಳಸುವುದು ಒಳ್ಳೆಯದು. ಇದರಿಂದ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು.