ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಅಡುಗೆಗೆ ಉಪ್ಪು ಬೇಕೇ ಬೇಕು. ಅನೇಕರು ಉಪ್ಪನ್ನು ಅಡುಗೆಗೆ ಮಾತ್ರ ಬಳಸ್ತಾರೆ. ಆದ್ರೆ ಒಂದು ಚಮಚ ಉಪ್ಪಿನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಸೌಂದರ್ಯವರ್ಧಕವಾಗಿ ಉಪ್ಪು ಕೆಲಸ ಮಾಡುತ್ತದೆ. ಜೊತೆಗೆ ಕೆಲವಷ್ಟು ಸಮಸ್ಯೆಗಳನ್ನು ಉಪ್ಪು ದೂರ ಮಾಡುತ್ತದೆ.
ಯಸ್, ಉಪ್ಪು ಬಹು ಉಪಯೋಗಿ. ಅಡುಗೆ ಬಿಟ್ಟು ಉಪ್ಪಿನ ವಿಶೇಷ ಗುಣಗಳ್ಯಾವುವು ಎಂಬುದನ್ನು ನೋಡೋಣ.
ಉಪ್ಪು ಹಲ್ಲು ಬೆಳ್ಳಗಾಗಲು ನೆರವಾಗುತ್ತದೆ. ಒಂದು ಚಮಚ ಉಪ್ಪಿಗೆ 2 ಚಮಚ ಬೇಕಿಂಗ್ ಪೌಡರ್ ಬೆರೆಸಿ, ಇದರಿಂದ ಬ್ರಷ್ ಮಾಡಬೇಕು. ಉಪ್ಪು ಹಾಗೂ ಬೇಕಿಂಗ್ ಪೌಡರ್ ಎರಡೂ ಹಲ್ಲಿನಲ್ಲಿರುವ ಕೊಳಕನ್ನು ಹೋಗಲಾಡಿಸಿ, ಹಲ್ಲು ಬೆಳ್ಳಗೆ ಹೊಳೆಯುವಂತೆ ಮಾಡುತ್ತವೆ.
ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸುವ ಶಕ್ತಿ ಉಪ್ಪಿಗಿದೆ. ಅರ್ಧ ಚಮಚ ಉಪ್ಪು, ಅರ್ಧ ಚಮಚ ಬೇಕಿಂಗ್ ಪೌಡರ್ ಜೊತೆ ಅರ್ಧ ಲೋಟ ನೀರನ್ನು ಸೇರಿಸಿ, ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು.
ಉಪ್ಪು ತಲೆ ಹೊಟ್ಟು ನಿವಾರಿಸುತ್ತದೆ. ನೆತ್ತಿಯ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ಒದ್ದೆಯಾಗಿರುವ ಬೆರಳುಗಳಿಂದ ಮಸಾಜ್ ಮಾಡಬೇಕು. ನಂತ್ರ ಶ್ಯಾಂಪೂ ಹಾಕಿ ವಾಶ್ ಮಾಡಿದ್ರೆ ತಲೆ ಹೊಟ್ಟನ್ನು ಕಡಿಮೆ ಮಾಡಿಕೊಳ್ಳಬಹುದು.
ಕೈ ಬೆರಳಿನ ಅಂದ ಹೆಚ್ಚಿಸಲು ಉಪ್ಪು ಸಹಕಾರಿ. ಸ್ನಾನ ಮಾಡುವಾಗ ನೀರಿಗೆ ಚಿಟಕಿ ಉಪ್ಪು ಹಾಕಿ ಸ್ನಾನ ಮಾಡುವುದು ಉತ್ತಮ. ಒಂದು ಚಮಚ ಉಪ್ಪು, ಒಂದು ಚಮಚ ಬೇಕಿಂಗ್ ಸೋಡಾ, ಒಂದು ಚಮಚ ಲಿಂಬೆ ರಸದ ಜೊತೆ ಅರ್ಧ ಕಪ್ ಬಿಸಿ ನೀರನ್ನು ಹಾಕಿ ಕೈ ಬೆರಳುಗಳನ್ನು ಅದರಲ್ಲಿ ಇಡಬೇಕು. ಸ್ವಲ್ಪ ಸಮಯದ ನಂತ್ರ ಮೃದುವಾದ ಬಟ್ಟೆಯಲ್ಲಿ ಮಸಾಜ್ ಮಾಡಿ ನಂತ್ರ ಕೈ ತೊಳೆದುಕೊಂಡು ಕ್ರೀಂ ಹಚ್ಚಿ. ಮುಖದ ಮಸಾಜ್ ಹಾಗೂ ಬಾಡಿ ಮಸಾಜ್ ಗಳಿಗೂ ಉಪ್ಪನ್ನು ಬಳಸಲಾಗುತ್ತದೆ.