ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗಿದವರನ್ನು ಉಪ್ಪಿನ ರಾಶಿಯಲ್ಲಿಟ್ಟರೆ ಬದುಕುತ್ತಾರೆ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನಂಬಿ ಯುವತಿಯ ಶವವನ್ನು ಉಪ್ಪಿನಲ್ಲಿ ಹೂತಿಟ್ಟ ಪ್ರಸಂಗ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಬಳ್ಳಾರಿಯಲ್ಲಿಯೂ ಇಂತಹದೇ ಘಟನೆ ನಡೆದಿತ್ತು.
ಜಂಬಿಗೆಮರದಹಳ್ಳಿ ಗ್ರಾಮದ ಕೆರೆ ದಡದಲ್ಲಿ ಭಾನುವಾರ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಗಾಜುಲವಾರಪಲ್ಲಿ ಗ್ರಾಮದ 22 ವರ್ಷದ ಅಮೃತಾ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಮೃತದೇಹವನ್ನು ನೀರಿನಿಂದ ಹೊರ ತೆಗೆದ ಗ್ರಾಮಸ್ಥರು ಮೃತದೇಹದ ಮೇಲೆ ಉಪ್ಪು ಸುರಿದು ಇಟ್ಟಿದ್ದಾರೆ. ಆಕೆಯನ್ನು ಬದುಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಎಷ್ಟು ಸಮಯ ಕಳೆದರೂ ಯುವತಿ ಬದುಕಿ ಬಾರದಿದ್ದಾಗ ಅಂತ್ಯಕ್ರಿಯೆ ನೆರವೇರಿಸಲಾಗಿದೆ.