ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಲ್ಲಿ ಇರಿತಕ್ಕೆ ಒಳಗಾದ ಲೇಖಕ ಸಲ್ಮಾನ್ ರಶ್ದಿ ಅವರು ವೆಂಟಿಲೇಟರ್ ನಲ್ಲಿದ್ದು, ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ದಾಳಿಯ ನಂತರ ಅವರ ಯಕೃತ್ತು ಹಾನಿಗೊಳಗಾಗಿದೆ ಎಂದು ಅವರ ಏಜೆಂಟ್ ಹೇಳಿದ್ದಾರೆ. ರಶ್ದಿ ಅವರ ಏಜೆಂಟ್ ಆಂಡ್ರ್ಯೂ ವೈಲಿ ಪ್ರಕಾರ, ಮುಂಬೈ ಮೂಲದ ವಿವಾದಿತ ಲೇಖಕರು ವೆಂಟಿಲೇಟರ್‌ನಲ್ಲಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಸಲ್ಮಾನ್ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಅವನ ತೋಳಿನ ನರಗಳು ತುಂಡಾಗಿವೆ. ಇರಿತದಿಂದ ಯಕೃತ್ತು ಹಾನಿಗೊಳಗಾಗಿದೆ ಎಂದು ತಿಳಿಸಿದ್ದಾರೆ.
“ದಿ ಸೈಟಾನಿಕ್ ವರ್ಸಸ್” ಬರೆದ ನಂತರ ವರ್ಷಗಳ ಕಾಲ ಇಸ್ಲಾಮಿಸ್ಟ್ ಸಾವಿನ ಬೆದರಿಕೆಗಳನ್ನು ಎದುರಿಸಿದ ರಶ್ದಿ, ಪಶ್ಚಿಮ ನ್ಯೂಯಾರ್ಕ್ ರಾಜ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 24 ವರ್ಷದ ನ್ಯೂಜೆರ್ಸಿ ನಿವಾಸಿಯಿಂದ ಇರಿತಕ್ಕೊಳಗಾದರು.
ನ್ಯೂಜೆರ್ಸಿಯ ಫೇರ್‌ವ್ಯೂನ ಹದಿ ಮತರ್ (24) ರಶ್ದಿಯನ್ನು ಇರಿದ ಶಂಕಿತ ಆರೋಪಿ ಎಂದು ಗುರುತಿಸಲಾಗಿದೆ ಎಂದು ನ್ಯೂಯಾರ್ಕ್ ರಾಜ್ಯ ಪೊಲೀಸ್‌ನ ಮೇಜರ್ ಯುಜಿನ್ ಸ್ಟಾನಿಸ್ಜೆವ್ಸ್ಕಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೈಋತ್ಯ ನ್ಯೂಯಾರ್ಕ್ ರಾಜ್ಯದ ಚೌಟೌಕ್ವಾ ಸರೋವರದ ಲಾಭರಹಿತ ಸಮುದಾಯವಾದ ಚೌಟಕ್ವಾ ಸಂಸ್ಥೆಯಲ್ಲಿ ವೇದಿಕೆಯಲ್ಲಿದ್ದ ರಶ್ದಿ(75) ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬರುವವರೆಗೂ ಪ್ರೇಕ್ಷಕರಲ್ಲಿ ಇದ್ದ ವೈದ್ಯರಿಂದ ರಶ್ದಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು ಎಂದು ಸ್ಟಾನಿಸ್ಜೆವ್ಸ್ಕಿ ಹೇಳಿದರು. ರಶ್ದಿಯವರಿಗೆ ವೈದ್ಯರು ತಕ್ಷಣವೇ ಪ್ರಥಮ ಚಿಕಿತ್ಸೆ ಆರಂಭಿಸಿದರು. ನಂತರ ಅವರನ್ನು ಸ್ಥಳೀಯ ಆಘಾತ ಕೇಂದ್ರಕ್ಕೆ ಹೆಲಿಕಾಪ್ಟರ್ ನಲ್ಲಿ ಸಾಗಿಸಲಾಯಿತು.