ಮುಂಬೈ: ಟೈಗರ್-3 ಸಿನಿಮಾ ವೀಕ್ಷಣೆ ವೇಳೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಗಳು ಥಿಯೆಟರ್ ಒಳಗೆ ಪಟಾಕಿ ಸಿಡಿಸಿದ್ದು, ಮಹಾರಾಷ್ಟ್ರದ ಮಾಲೆಗಾಂವ್ ಥಿಯೇಟರ್ ನಲ್ಲಿ ಅನಾಹುತ ಸಂಭವಿಸಿದೆ.
ಈ ಘಟನೆ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ಥಿಯೇಟರ್ ಒಳಗೆ ಪಟಾಕಿಗಳನ್ನು ಸಿಡಿಸದಂತೆ ಮನವಿ ಮಾಡಿದ್ದಾರೆ.
ಈ ಕುರಿತು ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ನಟ ಸಲ್ಮಾನ್ ಖಾನ್, ಯಾರೂ ಕೂಡ ಥಿಯೇಟರ್ ಒಳಗಡೆ ಪಟಾಕಿ ಸಿಡಿಸಬಾರದು. ಈ ಬಗ್ಗೆ ಥಿಯೇಟರ್ ಮಾಲೀಕರು ಕೂಡ ಎಚ್ಚರಿಕೆ ವಹಿಸಬೇಕು. ಪಟಾಕಿ ಥಿಯೇಟರ್ ಒಳಗೆ ತೆಗೆದುಕೊಂಡು ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಾಲೆಗಾಂವ್ ಥಿಯೇಟರ್ ನಲ್ಲಿ ಟೈಗರ್-3 ಸಿನಿಮಾ ವೀಕ್ಷಣೆ ವೇಳೆ ಸಲ್ಮಾನ್ ಖಾನ್ ಅಭಿಮಾನಿಗಳು ಏಕಾಏಕಿ ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಕಿಡಿಗಳು ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರ ಮೇಲೆ ಬಿದ್ದಿದೆ. ಕಿಡಿ ಬೀಳುತ್ತಿದ್ದಂತೆ ಭಯಗೊಂಡ ಪ್ರೇಕ್ಷಕರು ಕಿರುಚಾಡಿದ್ದಾರೆ. ಈ ಘಟನೆ ಬೆನ್ನಲ್ಲೇ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಥಿಯೇಟರ್ ಗಳ ಒಳಗೆ ಪಟಾಕಿ ಸಿಡಿಸದಂತೆ ಸೂಚಿಸಿದ್ದಾರೆ.