ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಛತ್ತೀಸ್ಗಡದ ಸುದ್ದಿ ನಿರೂಪಕಿಯೊಬ್ಬರು ಈಗ ಶವವಾಗಿ ಪತ್ತೆಯಾಗಿದ್ದಾರೆ. ಐದು ವರ್ಷಗಳ ಹಿಂದೆಯೇ ಆಕೆಯ ಪ್ರಿಯಕರ ತನ್ನ ಸಹಚರನೊಂದಿಗೆ ಸೇರಿ ಸುದ್ದಿ ನಿರೂಪಕಿಯನ್ನು ಹತ್ಯೆ ಮಾಡಿ ಶವವನ್ನು ಬೆಡ್ ಶೀಟ್ ಒಂದರಲ್ಲಿ ಇಟ್ಟು ಹೂತಿದ್ದ ಎನ್ನಲಾಗಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಶವವನ್ನು ಹೊರ ತೆಗೆಯಲು 42 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಹೆದ್ದಾರಿಯನ್ನು ಅಗೆಯಲಾಗಿದೆ.
ಸುದ್ದಿ ನಿರೂಪಕಿ 25 ವರ್ಷದ ಸಲ್ಮಾ ಸುಲ್ತಾನ್ 2018 ರಲ್ಲಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ಸಲ್ಮಾ ಸುಲ್ತಾನ್ ಪ್ರಿಯಕರ ಮಧುರ್ ಸಾಹು ಎಂಬಾತನ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ ವೇಳೆ ಮಧುರ್ ಸಾಹುನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ.
ಐದು ವರ್ಷಗಳ ಹಿಂದೆಯೇ ತನ್ನ ಸಹಚರನ ಜೊತೆ ಸೇರಿ ಸಲ್ಮಾ ಸುಲ್ತಾನ್ ಹತ್ಯೆ ಮಾಡಿದ್ದ ಮಧುರ್ ಸಾಹು, ಬೆಡ್ ಶೀಟ್ ಒಂದರಲ್ಲಿ ಶವವನ್ನು ಸುತ್ತಿ ಹೂತು ಹಾಕಿದ್ದ. ಆ ಬಳಿಕ ಅಲ್ಲಿ ಕೊರ್ಬಾ – ದರಿ ಮಾರ್ಗದ ನಡುವಿನ ಹೆದ್ದಾರಿ ನಿರ್ಮಾಣವಾಗಿದ್ದು, ಮಧುರ್ ನೀಡಿದ ಮಾಹಿತಿ ಮೇರೆಗೆ ಶವವನ್ನು ಹೊರ ತೆಗೆಯಲು ರಸ್ತೆಯನ್ನು ಅಗೆಯಲಾಯಿತು. ಈ ವೇಳೆ ಅಸ್ತಿಪಂಜರ ಸಿಕ್ಕಿದ್ದು ಡಿಎನ್ಎ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದು ಹೆಚ್ಚಿನ ವಿಚಾರಣೆಯಿಂದ ತಿಳಿದು ಬರಬೇಕಿದೆ.