
ಚಾಮರಾಜನಗರ: ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೆಟ್ಟದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಹನೂರು ತಾಲೂಕಿನ ಪುದೂರು ಗ್ರಾಮದ ನವೀನ್(31) ಬಂಧಿತ ಆರೋಪಿ. ಪುದೂರಿನಿಂದ ದನದ ಮಾಂಸ ತಂದು ಕ್ಷೇತ್ರದ ಕಲ್ಯಾಣ ಮಂಟಪದ ಬಳಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. 23 ಕೆಜಿ ದನದ ಮಾಂಸ ಮತ್ತು ಮಾಂಸ ಸಾಗಣೆಗೆ ಬಳಸಿದ್ದ ದ್ವಿಚಕ್ರ ವಾಹನ ವಶ ಪಡೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ನವೀನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ರಜನಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.