ಬೆಂಗಳೂರು: ಚುನಾವಣಾ ಆಯೋಗ ಅನುಮತಿ ನೀಡಿದರೆ ವೇತನ ಹೆಚ್ಚಳ ಮಾಡಲಾಗುವುದು. ಮುಷ್ಕರ ಕೈಗೊಳ್ಳಬೇಡಿ ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಸಾರಿಗೆ ಸಂಸ್ಥೆ ನೌಕರರು ಏಪ್ರಿಲ್ 7 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಕಳೆದ ಡಿಸೆಂಬರ್ ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಕಾರಣ ಸಾಕಷ್ಟು ಜನರಿಗೆ ಸಾಕಷ್ಟು ತೊಂದರೆಯಾಗಿತ್ತು. ಈ ಸಂದರ್ಭದಲ್ಲಿ 9 ಬೇಡಿಕೆಗಳನ್ನು ಸಂಸ್ಥೆ ನೌಕರರು ಮುಂದಿಟ್ಟಿದ್ದು, 8 ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಸಾರಿಗೆ ನೌಕರರಿಗೆ ವೇತನ ನೀಡಲಾಗುತ್ತಿದೆ. ಆರೋಗ್ಯ ಭಾಗ್ಯ, ಕೋವಿಡ್ ನಿಂದ ಮೃತಪಟ್ಟವರಿಗೆ 30 ಲಕ್ಷ ರೂ. ಪರಿಹಾರ, ಹೆಚ್.ಆರ್.ಎಂ.ಎಸ್. ಅಳವಡಿಕೆಗೆ, ಬಾಟಾ ನೀಡಲು ಒಪ್ಪಿಗೆ, ಹಿರಿಯ ಅಧಿಕಾರಿಗಳ ಕಿರುಕುಳ ತಪ್ಪಿಸಲು ಕ್ರಮ, ಟಿಕೆಟ್ ನೀಡದೆ ಇದ್ದರೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ತಡೆ, ಅಂತರ ನಿಗಮ ವರ್ಗಾವಣೆಗೆ ಒಪ್ಪಿಗೆ ನೀಡಲಾಗಿದೆ. ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತಗೊಳಿಸಲಾಗಿದೆ. ಹೀಗೆ ಸಂಸ್ಥೆಯ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲು ಪ್ರತಿದಿನ 1 ಕೋಟಿಯಷ್ಟು ಜನ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಸಂಚರಿಸುತ್ತಿದ್ದರು. ಕೊರೋನಾ ಕಾರಣದಿಂದ 60 ಲಕ್ಷ ಜನ ಪ್ರತಿದಿನ ಸಂಚರಿಸುತ್ತಿದ್ದು, ಆದಾಯ ಕೊರತೆಯಾಗಿದೆ. ಹಾಗೆಂದು ಸಿಬ್ಬಂದಿಗೆ ವೇತನ ಕಡಿತ ಮಾಡಿಲ್ಲ. ಉಪ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಯೋಜನೆಗಳು ಪ್ರಕಟಿಸುವಂತಿಲ್ಲ. ಚುನಾವಣಾ ಆಯೋಗ ಅನುಮತಿ ನೀಡಿದರೆ ವೇತನ ಹೆಚ್ಚಳ ಮಾಡಲಾಗುವುದು. ಸಾರಿಗೆ ಸಿಬ್ಬಂದಿ ಮುಷ್ಕರ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
4 ಸಾರಿಗೆ ನಿಗಮಗಳಿಂದ ಪ್ರತಿ ವರ್ಷ 3200 ಕೋಟಿ ರೂಪಾಯಿ ನಷ್ಟವಾಗುತ್ತಿತ್ತು. ವೇತನ ಹೆಚ್ಚಳ ಮಾಡಿದರೆ ಹಣಕಾಸು ಹೊರೆಯಾಗಲಿದೆ. ಆದರೂ, ಬೇಡಿಕೆ ಈಡೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ನೌಕರರು ನಿಗಮಗಳಿಗೆ ಶಕ್ತಿ ನೀಡಬೇಕು. ಮುಷ್ಕರವನ್ನು ನಡೆಸಬಾರದು ಎಂದು ಮನವಿ ಮಾಡಿದ್ದು, 6ನೇ ವೇತನ ಆಯೋಗದ ಸಮನಾಂತರ ವೇತನಕ್ಕೆ ಬೇಡಿಕೆಯಿದೆ. ಸಿಬ್ಬಂದಿಗೆ ಹೆಚ್ಚುವರಿ ಸೌಲಭ್ಯ ನೀಡಲಾಗಿದೆ. ಒಟಿ ಕೊಡುತ್ತಿದ್ದು ಕಂಡಕ್ಟರ್ ಗಳಿಗೆ ಶೇಕಡ 2 ರಷ್ಟು ಇನ್ಸೆಂಟಿವ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.