ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ/ಉಪ ಚುನಾವಣೆ ಡಿಸೆಂಬರ್ 27ರಂದು ನಡೆಯಲಿದೆ. ಮತದಾನ ನಡೆಯುವ ವ್ಯಾಪ್ತಿಯ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ಡಿಸೆಂಬರ್ 27ರಂದು ವೇತನ ಸಹಿತ ರಜೆ ಘೋಷಿಸಿ ರಾಜ್ಯ ಚುನಾವಣಾ ಆಯೋಗದಿಂದ ಆದೇಶ ಹೊರಡಿಸಲಾಗಿದೆ.
ಹಲವೆಡೆ ಪುರಸಭೆ, ನಗರಸಭೆ, ಗ್ರಾಮ ಪಂಚಾಯಿತಿ ಉಪ ಚುನಾವಣೆ, ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಉಪ ಚುನಾವಣೆ ಸಂಬಂಧ ಮತದಾನ ನಡೆಯುವ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರೆ ಎಸ್ಟಾಬ್ಲಿಶ್‍ಮೆಂಟ್ ಗಳಲ್ಲಿ ಖಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ಡಿ.27ರ ಸೋಮವಾರ ದಂದು ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ.
ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತಚಲಾಯಿಸಲು ಅನುಕೂಲವಾಗುವಂತೆ ಆಯಾ ಇಲಾಖೆಯ ಮುಖ್ಯಸ್ಥರು ವ್ಯವಸ್ಥೆ ಮಾಡಬೇಕು. ಈ ಚುನಾವಣಾ ಕಾರ್ಯಗಳಿಗೆ ನಿಯೋಜಿಸ್ಪಟ್ಟ ಎಲ್ಲಾ ಸರ್ಕಾರಿ ನೌಕರರು ಚುನಾವಣಾ ಕಾರ್ಯಕ್ಕೆ ಹಾಜರಾಗಬೇಕೆಂದು ಹೇಳಲಾಗಿದೆ.