ಬೆಂಗಳೂರು: 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡುವ ಬಗ್ಗೆ ಮುಂದಿನ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಚಿವಾಲಯ ನೌಕರರ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಏಳನೇ ವೇತನ ಆಯೋಗದ ವರದಿ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಿದೆ. ಚುನಾವಣೆ ನಂತರ ವರದಿ ಜಾರಿ ಮಾಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದರು. ಆದರೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳದಿರುವುದು ನೌಕರರಿಗೆ ತೀವ್ರ ನಿರಾಸೆ ತಂದಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ಸಂಗಾ ತಿಳಿಸಿದ್ದಾರೆ.
ಕೂಡಲೇ ಶೇಕಡ 30ರಷ್ಟು ವೇತನ ಹೆಚ್ಚಿನ ಮಾಡಬೇಕು. ಉದಾಸಿನ ಧೋರಣೆ ತಾಳಿದಲ್ಲಿ ರಾಜ್ಯಮಟ್ಟದ ಸಂಘಟನೆಯೊಂದಿಗೆ ಸೇರಿ ಚರ್ಚಿಸಿ ಪ್ರತಿಭಟನೆ ರೂಪರೇಷೆ ಸಿದ್ಧಪಡಿಸಲಾಗುವುದು. ಮುಂದಿನ ಎರಡು ವಾರದೊಳಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.